ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಹರಪನಹಳ್ಳಿ.ಡಿ.೨೩; ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬಹುಮತ ಸಿಗುತ್ತದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆಯಿಂದ  ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಜನರೆದುರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಗಳನ್ನು ಹೇಳಿ ಕಾರ್ಯಕರ್ತರು ಮತ ಕೇಳುತ್ತಾರೆ. ನಾನು ಸಹ ಹಳ್ಳಿಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ ಎಂದರು.
ಎಸ್‍ಎಫ್‍ಸಿ ವಿಶೇಷ ಅನುದಾನದಡಿ ₹ 1.61 ಕೋಟಿ ವೆಚ್ಚದಲ್ಲಿ 19ನೇ ವಾರ್ಡ್ ಕೆಎಚ್‍ಬಿ ಕಾಲೊನಿ ಮಹಲಿಂಗೇಶ್ವರ ದೇವಸ್ಥಾನದ ಬಳಿ ಕಾಂಕ್ರೀಟ್‌ ರಸ್ತೆ, 14ನೇ ವಾರ್ಡ್ ಪಿಎಲ್‍ಡಿ ಬ್ಯಾಂಕ್ ಹಿಂಭಾಗ 17ನೇ ವಾರ್ಡ್‌ ಉದಯ ಪಾನ್‍ಶಾಪ್ ಬಳಿ 10ನೇ ವಾರ್ಡ್ ಗೊರವಿನತೋಟದ ಬಳಿ  5ನೇ ವಾರ್ಡ್ ಬಾಲಕಿಯರ ವಿದ್ಯಾರ್ಥಿ ನಿಲಯದ ಬಳಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ  ಪುರಸಭೆ ಅಧ್ಯಕ್ಷ ಇಜಂತಕರ ಮಂಜುನಾಥ್, ಸದಸ್ಯರಾದ ಕಿರಣ್, ಎಚ್.ಎಂ. ಅಶೋಕ್, ವಿನಯ್, ಜಾವಿದ್ , ರೊಕ್ಕಪ್ಪ, ನಿಟ್ಟೂರು ಸಣ್ಣಹಾಲಪ್ಪ, ಸತ್ತೂರು ಹಾಲೇಶ್, ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶ್, ಲೋಕೇಶ್, ಪ್ರಕಾಶ್, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ್, ಸಂತೋಷ್, ಶಿವಕುಮಾರ್, ವೆಂಕಟೇಶ್, ಬಿದ್ದಪ್ಪ ಇದ್ದರು.