ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ

ಪಿರಿಯಾಪಟ್ಟಣ: ಮಾ:27: ಶಾಸಕನಾದ ನಂತರ ಅಧಿಕಾರ ಸಿಕ್ಕಿತು ಎಂದು ಹುಂಬುತನ ಬೆಳೆಸಿಕೊಳ್ಳದೆ ಸಾಮಾನ್ಯ ಮನುಷ್ಯನಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಮುಮ್ಮಡಿ ಕಾವಲು ಹಾಗೂ ಉತ್ತೇನಹಳ್ಳಿ ಗ್ರಾಮದಲ್ಲಿ 3.4 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಶಾಸಕನಾದ ನಂತರ ನೆರೆ ಪ್ರವಾಹ ಮತ್ತು ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ಸರಕಾರದಿಂದ ಅನುದಾನ ತಂದು ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ, ತಾಲ್ಲೂಕಿನ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಸಾಧ್ಯವಿಲ್ಲ ಸಾಕಷ್ಟು ಸಮಯ ಬೇಕಿದೆ ಹಂತ ಹಂತವಾಗಿ ಪರಿಹಾರ ನೀಡುತ್ತಿದ್ದು ಮುಂದಿನ ಬಾರಿಯೂ ಬೆಂಬಲಿಸುವಂತೆ ಮತದಾರರನ್ನು ಕೋರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಅಭಿವೃದ್ಧಿ ಕೆಲಸಗಳನ್ನು ಮನಗಂಡು ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು, ಕಾಡಾನೆ ಹಾವಳಿಯಿಂದ ತಾಲ್ಲೂಕಿನ ಕಾಡಂಚಿನ ಗ್ರಾಮಗಳ ನಿವಾಸಿಗಳು ನಷ್ಟ ಅನುಭವಿಸುತ್ತಿರುವುದನ್ನು ಮನಗಂಡು ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವಂತೆ ಮತ್ತು ರೈತರು ಸಾಕುವ ಜಾನುವಾರುಗಳ ಉತ್ತಮ ಆರೋಗ್ಯದ ದೃಷ್ಟಿಯಿಂದ ನೂತನ ಪಶು ಆಸ್ಪತ್ರೆಗಳನ್ನು ನಿರ್ಮಿಸುವಂತೆ ಈಗಾಗಲೇ ಸದನದಲ್ಲಿ ಚರ್ಚಿ ಸಿದ್ದು ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ, ತಾಲ್ಲೂಕಿನ ವಿವಿಧೆಡೆಯ ಹಾಡಿಗಳಲ್ಲಿ ನೂತನ ಮನೆ ನಿರ್ಮಿಸಲು 100 ಮನೆಗಳು ಮಂಜೂರಾಗಿದ್ದು ಅವುಗಳನ್ನು ಸರ್ಕಾರವೇ ನಿರ್ಮಿಸಲು ಮುಂದಾಗಲಿ ಎಂದರು.
ಈ ಸಂದರ್ಭ ತಹಸೀಲ್ದಾರ್ ಶ್ವೇತಾ ರವೀಂದ್ರ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯ ಟಿ.ಈರಯ್ಯ, ಮಾಜಿ ಅಧ್ಯಕ್ಷ ಮಾಕೋಡು ಜವರಪ್ಪ, ಪಿಡಬ್ಲ್ಯುಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಬಿಇಒ ಚಿಕ್ಕಸ್ವಾಮಿ, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಮುಖಂಡರಾದ ನಂಜುಂಡಸ್ವಾಮಿ, ಮಧುಕುಮಾರ್, ಮಂಜುನಾಥ್, ವಿಶ್ವನಾಥ್, ಸುರೇಶ್, ಪವನ್, ಪುಟ್ಟಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.