
ತುಮಕೂರು, ಸೆ. ೨- ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭ್ಯುದಯವಾಗುತ್ತದೆ ಎಂದು ಶಾಸಕ ಬಿ. ಸುರೇಶ್‌ಗೌಡ ಹೇಳಿದರು.
ಗ್ರಾಮಾಂತರ ಕ್ಷೇತ್ರದ ಹುಳ್ಳೇನಹಳ್ಳಿ ಮುಖ್ಯರಸ್ತೆಯಿಂದ ತೋಪೇಗೌಡನಪಾಳ್ಯಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುಖೇನ ಕ್ಷೇತ್ರದ ಜನರ ಋಣ ತೀರಿಸುವಂತಹ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಓಆರ್‌ಎಫ್ ಯೋಜನೆಯಡಿಯಲ್ಲಿ ಕ್ಷೇತ್ರದ ರಸ್ತೆ ಸುಧಾರಣೆ ಮತ್ತು ರಸ್ತೆ ಅಭಿವೃದ್ಧಿಗಾಗಿ ರೂ. ೭೦ ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದು, ಸದರಿ ಅನುದಾನದಲ್ಲಿ ಈ ಭಾಗದ
ನಾಲ್ಕಾರು ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಿಕೊಡುವುದಾಗಿ ಹೇಳಿದರು.
ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಹೊಳಕಲ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಆಂಜಿನಪ್ಪ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನೀಲಕಂಠಪ್ಪ, ಮುಖಂಡರಾದ ಸಿದ್ದೇಗೌಡರು, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುನಂದ ಹನುಮೇಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಮೂರ್ತಿ, ಕುಮಾರ್, ಮುಖಂಡರಾದ ವಡ್ಡರಹಳ್ಳಿ ಶ್ರೀನಿವಾಸ್, ಮರೀಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕಿರಣ್, ಹಮೀದ್ ಖಾನ್, ಗಿರೀಶ್, ರಮೇಶ್, ನಟರಾಜು, ಹೊಳಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನಾಗಣ್ಣ, ನರುಗನಹಳ್ಳಿ ಕುಮಾರ್ ಮತ್ತಿತರರು ಭಾಗವಹಿಸಿದ್ದರು.