ರಸ್ತೆ ಅಭಿವೃದ್ಧಿಗೆ ಶಾಸಕ ಬಳ್ಳಾರಿ ಭರವಸೆ

ಬ್ಯಾಡಗಿ,ನ.5- ಪಟ್ಟಣದ ವೀರಶೈವ ಮುಕ್ತಿಧಾಮಕ್ಕೆ ಹೋಗುವ ರಸ್ತೆಯಲ್ಲಿ ಯುಜಿಡಿ ವತಿಯಿಂದ ಮಾಡುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ನಿನ್ನೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿ ರಸ್ತೆ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಯುಜಿಡಿ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಕ್ತಿದಾಮಕ್ಕೆ ತೆರಳುವ ರಸ್ತೆ ಹಾಗೂ ಅದರ ಎರಡೂ ಭಾಗಗಳಲ್ಲಿ ಕಾಲುವೆಗಳ ನಿರ್ಮಾಣ ಕಾರ್ಯಕ್ಕೆ ಪುರಸಭೆಯಲ್ಲಿ ಲಭ್ಯತೆಯಿರುವ ಅನುದಾನದೊಂದಿಗೆ ತಾವು ಸಹ ಹೆಚ್ಚುವರಿಯಾಗಿ 15 ಲಕ್ಷ ರೂಗಳ ಅನುದಾನವನ್ನು ನೀಡುವ ಮೂಲಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ತಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ವಿ. ಎಂ. ಪೂಜಾರ ಮಾತನಾಡಿ, ರಸ್ತೆ ಹಾಗೂ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಪುರಸಭೆಯಿಂದ 30 ಲಕ್ಷ ರೂಗಳ ಅನುದಾನ ಲಭ್ಯತೆಯಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಕಾಲಕ್ಕೆ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಯುಜಿಡಿ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಪಟ್ಟಣದಲ್ಲಿ ಅಗತ್ಯವಿರುವ ಎಲ್ಲ ವಾರ್ಡ್’ಗಳಲ್ಲಿ ರಸ್ತೆ ಮತ್ತು ಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯುಜಿಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನವೀನಕುಮಾರ, ವರ್ತಕ ಸುರೇಶ ಮೇಲಗಿರಿ, ಶಾಸಕರ ಆಪ್ತ ಸಹಾಯಕ ಬಸವರಾಜ ಕುಲಕರ್ಣಿ, ಎಸ್.ಎಸ್. ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.