ರಸ್ತೆ ಅಪಘಾತ: ೬ ಮಂದಿ ಸಜೀವ ದಹನ

ಪಲ್ನಾಡು(ಆಂಧ್ರ ಪ್ರದೇಶ): ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಖಾಸಗಿ ಬಸ್‌ವೊಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ೬ ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ
ಆಂಧ್ರ ಪ್ರದೇಶದಲ್ಲಿ ನಡೆದಿದೆ. ಇವರೆಲ್ಲರೂ ಮತದಾನಕ್ಕಾಗಿ ಬಂದು ಹೈದರಾಬಾದ್‌ಗೆ ವಾಪಸ್ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಹೈದರಾಬಾದ್‌ಗೆ ಹೊರಟಿದ್ದ ಖಾಸಗಿ ಬಸ್ ಚಿಲಕಲೂರಿಪೇಟೆ ಮಂಡಲದ ಯೂರಿವಾರಿಪಾಲೆಂ ಸಮೀಪ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಚಾಲಕ ಸೇರಿ ಆರು ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ನಿಲಯಪಾಲೆಂನ ಕಾಶಿ ಬ್ರಹ್ಮೇಶ್ವರ ರಾವ್ (೬೨), ಪತ್ನಿ ಲಕ್ಷ್ಮಿ (೫೮) ಮತ್ತು ಮೊಮ್ಮಗಳು ಶ್ರೀಸಾಯಿ (೯) ಸಾವನಪ್ಪಿದ ದುರ್ದೈವಿಗಳಾಗಿದ್ದಾರೆ. ಉಳಿದಂತೆ ಬಸ್ ಚಾಲಕ ಅಂಜಿ, ಮಧ್ಯಪ್ರದೇಶ ಮೂಲದ ಟಿಪ್ಪರ್ ಚಾಲಕ ಹರಿಸಿಂಗ್ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.೨೦ಕ್ಕೂ ಹೆಚ್ಚಿನ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.ಬಸ್‌ನಲ್ಲಿದ್ದ ೪೦ ಪ್ರಯಾಣಿಕರು ಹೆಚ್ಚಿನವರು ಚಿನಗಂಜಾಂ, ಗೊನಸಪುಡಿ ಮತ್ತು ನಿಲಯಪಾಲೆಂ ನಿವಾಸಿಗಳಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇಗವಾಗಿ ಬಂದ ಬಸ್ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿದ್ದರಿಂದ ಕೆಲವೇ ಕ್ಷಣಗಳಲ್ಲಿ ಎರಡೂ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ.
ಅಪಘಾತದ ಬಗ್ಗೆ ಸ್ಥಳೀಯರು ಠಾಣೆಗೆ ಕರೆ ಮಾಡಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.