ರಸ್ತೆ ಅಪಘಾತ ಪ್ರಮಾಣ ತಗ್ಗಿಸಲು ಕ್ರಮವಹಿಸಿ

ಚಿತ್ರದುರ್ಗ,ಮಾ.26; ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ರಾಜ್ಯ ಸಮಿತಿ ನಿರ್ದೇಶನದಂತೆ ರಸ್ತೆ ಅಪಘಾತ ತಗ್ಗಿಸಲು ಕ್ರಮಗಳನ್ನು ನೀಡಲಾಗಿದ್ದು, ಅದರಂತೆ ಪ್ರತಿ ವರ್ಷ, ಪ್ರತಿ ತಿಂಗಳು ಅಪಘಾತ ಪ್ರಮಾಣ ಕಡಿಮೆಯಾಗಬೇಕು. ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ತಾಕೀತು ಮಾಡಿದರು.
ಜಿಲ್ಲೆಯಲ್ಲಿ 36 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಇಂತಹ ಸ್ಥಳಗಳಲ್ಲಿ ರಸ್ತೆ ಸಂಚಾರ ನಿಯಮ, ಸೂಚನೆ ಅಳವಡಿಸಲಾಗಿದೆ. ರಸ್ತೆ ಪುನರ್ ನಿರ್ಮಾಣ ಮಾಡುವಾಗ ಅಗತ್ಯವಿರುವ ರಸ್ತೆ ಸುರಕ್ಷತಾ ಮಾರ್ಗಗಳ ಸೂಚಿ ತಕ್ಷಣ ಕಾಣುವಂತೆ ಅಳವಡಿಸಿರಬೇಕು. ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡುವಾಗ ಇಂತಹ ತಪ್ಪುಗಳಿಂದ ರಾತ್ರಿ ವೇಳೆಯಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಉಂಟಾಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಎಲ್ಲೆಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲವೂ ಅಂತಹ ಕಡೆ ತಕ್ಷಣವೇ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.
ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಹಲವಾರು ಕಡೆ ಪಾರ್ಕಿಂಗ್ ಸಮಸ್ಯೆ ಇದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ನಗರ ಮತ್ತು ಪಟ್ಟಣಗಳಲ್ಲಿ ಗುರುತಿಸಿದರೆ ಸಂಚಾರಕ್ಕೆ ಆಡಚಣೆ ಉಂಟಾಗುವುದಿಲ್ಲ. ನಗರ ಮತ್ತು ಪಟ್ಟಣಗಳಲ್ಲಿ ಪ್ರತ್ಯೇಕ ಪಾರ್ಕಿಂಗ್ ನಿಗದಿಪಡಿಸಲು ಕ್ರಮಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಆಟೋರಿಕ್ಷಾ ನಿಲ್ದಾಣ ನಿರ್ಮಾಣ ಮಾಡಿ ಅಪಘಾತಗಳು ಸಂಭವಿಸದಂತೆ ಜಾಗರೂಕತೆವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯ ಬಿ.ಜಿ.ಕೆರೆ, ಆದಿವಾಲ, ಜೆ.ಜಿ.ಹಳ್ಳಿ, ಕೆಳಗಳಹಟ್ಟಿ ಸ್ಥಳಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈ ಸ್ಥಳಗಳಲ್ಲಿ ಸಂಚಾರ ನಿಯಮಗಳನ್ನು ಅಳವಡಿಸಬೇಕು ಎಂದು ಸೂಚಿಸಿದ ಅವರು, ತುರುವನೂರು ರೈಲ್ವೆ ಗೇಟ್‍ನಲ್ಲಿ ಸ್ವಲ್ಪ ಮಳೆಯಾದರೆ ಸಾಕು ಇಕ್ಕಟ್ಟಾಗಿರುವ ಸೇತುವೆಯಲ್ಲಿ ಮಳೆ ನೀರು ನುಗ್ಗಿ ಹಲವು ದಿನಗಳ ಕಾಲ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಲೈಸನ್ಸ್ ಇಲ್ಲದ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ವಾಹನಗಳು ಅಪಘಾತವಾದ ಸಂದರ್ಭದಲ್ಲಿ ಪ್ರಕರಣ ದಾಖಲು ಮಾಡುವ ಸಂದರ್ಭಗಳಲ್ಲಿ ತೊಂದರೆ ಎದುರಾಗುತ್ತಿದೆ. ಹಾಗಾಗಿ ಆರ್‍ಟಿಒ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ ಪೊಲೀಸ್ ಇಲಾಖೆಯಿಂದ 52,340 ಪ್ರಕರಣಗಳಲ್ಲಿ ರೂ.1.67 ಕೋಟಿ ದಂಡ ಮತ್ತು ಸಾರಿಗೆ ಇಲಾಖೆಯಿಂದ 12,337 ವಾಹನಗಳ ತಪಾಸಣೆ ಮಾಡಿ ರೂ.1650 ಪ್ರಕರಣಗಳಲ್ಲಿ ರೂ.1.19 ಕೋಟಿ ದಂಡ ವಸೂಲಿ ಮಾಡಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವರಿಗೆ ರೂ.10 ಸಾವಿರ ದಂಡ ವಿಧಿಸಲಾಗುತ್ತಿದೆ ಹಾಗೂ ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ. ಈ ತ್ರೈಮಾಸಿಕದಲ್ಲಿ ನಾಲ್ಕು ಚಾಲನಾ ಪರವಾನಗಿಗಳನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ಆರ್‍ಟಿಒ ಅಧಿಕಾರಿ ಜಿ.ಎಸ್.ಹೆಗಡೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ರವಿತೇಜ್, ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.