ರಸ್ತೆ ಅಪಘಾತ: ಕಮ್ಯುನಿಸ್ಟ್ ಪಕ್ಷದ ಮುಖಂಡ ಮ್ಯಾಗೇರಿ ದುರ್ಮರಣ

ಕಲಬುರಗಿ, ಮೇ 4 :ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಕಮ್ಯುನಿಸ್ಟ್ ಮಾರ್ಕ್‍ಸಿಸ್ಟ್ ಪಕ್ಷದ ಮುಖಂಡ ಅಶೋಕ್ ಮ್ಯಾಗೇರಿ ಅವರು ಮೃತಪಟ್ಟ ಘಟನೆ ನೆರೆಯ ತೆಲಂಗಾಣ್ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ 4-30 ಗಂಟೆಗೆ ವರದಿಯಾಗಿದೆ.
ಮೃತರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಜದೇವಿ, ಲಾವಣ್ಯ, ಪ್ರಥಮ, ಮಹೇಶ್ ಸೇರಿ ಮೂವರು ಮಕ್ಕಳು ಹಾಗೂ ಅಪಾರ ಬಂಧು, ಬಳಗ ಹಾಗೂ ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಅಗಲಿದ್ದಾರೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಶೋಕ್ ಮ್ಯಾಗೇರಿ ಅವರು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದರು. ಅವರ ನಿಧನವು ಪಕ್ಷಕ್ಕೆ ಹಾಗೂ ಹೋರಾಟಕ್ಕೆ ತೀವ್ರ ನಷ್ಟವುಂಟು ಮಾಡಿದೆ ಎಂದು ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅಶೋಕ್ ಮ್ಯಾಗೇರಿ ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆನ್ನು ನೋವಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ಸೇರಿದ್ದರು. ಆದಾಗ್ಯೂ, ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ಹೈದ್ರಾಬಾದ್‍ಕ್ಕೆ ಹೋಗುವಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿ ಅಸುನೀಗಿದರು. ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಶಹಾಬಾದ್ ತಾಲ್ಲೂಕಿನ ಭಂಕೂರಿನಲ್ಲಿ ಮಧ್ಯಾಹ್ನ ನೆರವೇರಿತು ಎಂದು ತಿಳಿದುಬಂದಿದೆ.
ಅಶೋಕ್ ಮ್ಯಾಗೇರಿ ಅವರ ನಿಧನಕ್ಕೆ ಸುನೀಲ್ ಮಾನ್ಪಡೆ, ಶ್ರೀಮಂತ್ ಬಿರಾದಾರ್, ಗೌರಮ್ಮ ಪಾಟೀಲ್, ರೇವಣಸಿದ್ದ ಕಲಬುರ್ಗಿ, ವೀರಭದ್ರಪ್ಪ ಮುಗಳಿ, ಶಾಂತಪ್ಪ ಪಾಟೀಲ್, ಮಲ್ಲಣ್ಣಗೌಡ ಪಾಟೀಲ್, ಸಿದ್ದಲಿಂಗ್ ಪಾಳಾ, ಶಿವಕುಮಾರ್ ಕವಲಗಾ, ಮೈಲಾರಿ ದೊಡ್ಡಮನಿ, ಸುಧಾಮ್ ಧನ್ನಿ, ಪಾಂಡುರಂಗ್ ಮಾವಿನಕರ್, ಶಾಂತಾ ಘಂಟೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.