ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

ಧಾರವಾಡ, ಡಿ 30: ಕಾರ್ ಹಾಗೂ ಲಾರಿ ನಡುವೆ ಅಪಘಾತ ಸಂಘವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದ ಸವದತ್ತಿ ರಸ್ತೆಯಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಕಾರ್‍ನಲ್ಲಿದ್ದ ರೆವಣಸಿದ್ದೇಶ್ವರ ಇಚ್ಚಂಗಿ, ವಿಜಯಾ ಇಚ್ಚಂಗಿ, ನಾಗರಾಜ ಇಚ್ಚಂಗಿ ಇವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇವರೆಲ್ಲರೂ ಸವದತ್ತಿಯಿಂದ ಹುಬ್ಬಳ್ಳಿಯ ಆಸ್ಪತ್ರೆಯೊಂದಕ್ಕೆ ಕಾರಿನಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಎದುರಿಗೆ ಬಂದ ಕಬ್ಬು ತುಂಬಿದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಧಾರವಾಡದ ಸವದತ್ತಿ ರಸ್ತೆಯ ಕೆ.ಇ.ಬಿ ಗ್ರಿಡ್ ಬಳಿ, ದುರ್ಗಮ್ಮ ದೇವಸ್ಥಾನದ ಹತ್ತಿರ ಈ ಅಪಘಾತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಡಿಎಸ್‍ಪಿ ಸಂಕದ, ಸಿಪಿಐ ಎಸ್.ಎನ್. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರ ನಾಯಕ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.