ರಸ್ತೆ ಅಪಘಾತ: ಇಬ್ಬರ ಸಾವು

ಬೆಂಗಳೂರು, ಡಿ.೨೬- ವೇಗವಾಗಿ ಹೋಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ನೆಲಮಂಗಲ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ. ಚುಂಚಘಟ್ಟದ ಮಂಜುನಾಥ್(೫೨) ಸೇರಿ ಇಬ್ಬರು ಸಾವನ್ನಪ್ಪಿದ್ದು, ದುರ್ಘಟನೆಯಲ್ಲಿ ಹೇಮಲತಾ, ಕೃತಿಕಾ, ಪ್ರಜ್ವಲ್‌ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವೇಗವಾಗಿ ಹೋಗುತ್ತಿದ್ದ ಕಾರು ನೈಸ್ ರಸ್ತೆಯಲ್ಲಿ ಮುಂದೆ ಲಾರಿಯ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮಂಜುನಾಥ್ ಪತ್ನಿ ಹೇಮಲತಾ,ಮಗಳು ಕೃತಿಕಾ(೨೦), ಮಗ ಪ್ರಜ್ವಲ್(೧೪)ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಬಳಿಕ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದು,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.