ರಸ್ತೆ ಅಪಘಾತದಲ್ಲಿ ಗರ್ಭಿಣಿ ಸಾವು

ಹೊನ್ನಾಳಿ.ನ.೪; ಶಿವಮೊಗ್ಗ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಗರ್ಭಿಣಿಯೋರ್ವಳು ಸ್ಥಳದಲ್ಲೇ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬೆನಕನಹಳ್ಳಿ ಗ್ರಾಮದ ಅಂಜಲಿ(೧೯) ಮೃತ ದುರ್ದೈವಿ. ದುರ್ಘಟನೆಯಲ್ಲಿ ಅಂಜಲಿ ಪತಿ ಅರುಣ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ತನ್ನ ಸ್ವಗ್ರಾಮ ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿಯಿಂದ ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆಗೆಂದು ಬೈಕ್‌ನಲ್ಲಿ ಪತ್ನಿ ಅಂಜಲಿಯನ್ನು ಅರುಣ್ ಕರೆದುಕೊಂಡು ಹೋಗಿದ್ದ. ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸಾಗುವ ವೇಳೆ ಶಿವಮೊಗ್ಗ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ಬಳಿ ಮುಂದೆ ಹೋಗುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಹಿಂದಿಕ್ಕುವ ಭರದಲ್ಲಿ ಬೈಕ್ ಸ್ಕಿಡ್ ಆಗಿದೆ. ಆ ವೇಳೆ ರಸ್ತೆಯ ಎಡ ಬದಿಗೆ ಸವಾರ ಅರುಣ್ ಬಿದ್ದಿದ್ದಾನೆ. ಆತನ ಪತ್ನಿ ಅಂಜಲಿ ರಸ್ತೆಯ ಬಲ ಬದಿಗೆ ಬಿದ್ದಿದ್ದಾಳೆ. ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಹೊಸಪೇಟೆ-ಧರ್ಮಸ್ಥಳ ಮಾರ್ಗದ ಕೆಎಸ್ಸಾರ್‍ಟಿಸಿ ಬಸ್ ಅಂಜಲಿ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಅಂತ್ಯಕ್ರಿಯೆ ವೇಳೆ ಅಂಜಲಿ ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿವಂತಿತ್ತು. ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದ ಅರುಣ್ ಎಂಬಾತನೊಂದಿಗೆ ನಾಲ್ಕು ತಿಂಗಳ ಹಿಂದಷ್ಟೇ ಅಂಜಲಿ ವಿವಾಹ ಆಗಿತ್ತು. ಆಕೆ ಮೂರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.