ರಸ್ತೆ ಅತಿಕ್ರಮಣ, ಕಾಲುವೆ ಒತ್ತುವರಿ ತೆರವಿಗೆ ಒತ್ತಾಯ

ಮೂಡುಬಿದಿರೆ, ಎ.೧೮- ಮಾರ್ಪಾಡಿ ಗ್ರಾಮದ ವರ್ತುಲ ರಸ್ತೆಯಿಂದ ಕಡಲಕೆರೆ ಪರಿಶಿಷ್ಠ ಜಾತಿ ಕಾಲನಿ ರಸ್ತೆಗೆ ಭೂಸ್ವಾಧೀನಕ್ಕೊಳಪಟ್ಟ ಪುರಸಭೆಯ ಆಸ್ತಿಯನ್ನು ಖಾಸಗಿ ವ್ಯಕ್ತಿಯವರು ಒತ್ತುವರಿ ಮಾಡಿ ಅಕ್ರಮವಾಗಿ ಕಂಪೌಂಡು ಕಟ್ಟುತ್ತಿದ್ದಾರೆ. ಈ ಅತಿಕ್ರಮಣವನ್ನು ತಡೆಹಿಡಿದು ಸರ್ಕಾರಿ ಸೊತ್ತನ್ನು ಸಂರಕ್ಷಿಸಬೇಕು. ಪಕ್ಕದಲ್ಲಿ  ನೀರು ಹರಿದುಹೋಗುವ  ಕಾಲುವೆಯನ್ನು ಸಂಪೂರ್ಣ ಮುಚ್ಚಿದ್ದು ಅದನ್ನು ತೆರವುಗೊಳಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಾಗರಿಕ ಹಕ್ಕು ಜಾಗೃತ ಸಮಿತಿಯ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ನಾರಾಯಣ ಕಡಲಕೆರೆ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ತಾನು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದು ನ್ಯಾಯಾಲಯವು ಈ ಕುರಿತು ವರದಿ ನೀಡುವಂತೆ ಪುರಸಭೆಗೆ ಸೂಚಿಸಿದ್ದು ಪರಿಣಾಮವಾಗಿ ರಸ್ತೆ ಒತ್ತುವರಿ ಮಾಡಿ ಕಟ್ಟಿರುವ ಕಂಪೌಂಡ್ ಗೋಡೆಯನ್ನು ಖಾಸಗಿ ವ್ಯಕ್ತಿಯವರು ತೆರವುಗೊಳಿಸಿರುತ್ತಾರೆ. ಕಳೆದ ವರ್ಷ ಸೆ.೯ರಂದು ಪುರಸಭೆಯು ನ್ಯಾಯಾಲಯಕ್ಕೆ ಈ ಕುರಿತು ಲಿಖಿತವಾಗಿ ತಿಳಿಸಿದೆ. ಈಗ ಅದೇ ಸ್ಥಳದಲ್ಲಿ ಮತ್ತೆ ಒತ್ತುವರಿ ಮಾಡಿ ಕಂಪೌಂಡು ಕಟ್ಟಿತ್ತಿದ್ದರೂ ಪುರಸಭೆ ಅಧಿಕಾರಿಗಳು ಮೌನವಾಗಿದ್ದಾರೆ. ಕಾಲುವೆಯನ್ನು ಮುಚ್ಚಿರುವುದರಿಂದ ಮಳೆಗಾಲದಲ್ಲಿ ನೀರು ಪರಿಶಿಷ್ಟ ಕಾಲನಿಗೆ  ನುಗ್ಗುತ್ತಿದೆ. ತಮಗೆ ನ್ಯಾಯ ದೊರಕಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಕುಮಾರ್, ಜೊತೆ ಕಾರ್‍ಯದರ್ಶಿ ರಮೇಶ್ ಬೋದಿ, ಭ್ರಷ್ಟಾಚಾರ ವಿರೋಧಿ ಜಾಗೃತ ದಳದ ಅಧ್ಯಕ್ಷ ಹರಿಪ್ರಸಾದ್ ನಾಯಕ್, ಸದಸ್ಯ ದಿವಾಕರ ಆಚಾರ್ಯ ಉಪಸ್ಥಿತರಿದ್ದರು.