ರಸ್ತೆ ಅಗೆಯಲು ಅನುಮತಿ ಕಡ್ಡಾಯ

ಬೆಂಗಳೂರು, ನ.೨೪- ಬೆಸ್ಕಾಂ ಮತ್ತು ಜಲಮಂಡಳಿಯವರು ರಸ್ತೆ ಅಗೆಯಬೇಕಾದರೆ ಕಡ್ಡಾಯವಾಗಿ ಬಿಬಿಎಂಪಿ ಅನುಮತಿ ಪಡೆದುಕೊಳ್ಳಬೇಕು.ಜತೆಗೆ ಕತ್ತರಿಸಿದ ಭಾಗವನ್ನು ಸಂಬಂಧಪಟ್ಟ ಇಲಾಖೆಗಳೇ ಪುನಃಶ್ಚೇತನಗೊಳಿಸ ಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರೊಂದಿಗೆ ಸಭೆ ನಡೆಸಿದ ಅವರು, ಅಗೆದ ಗುಂಡಿ ಪುನಃಶ್ಚೇತನಗೊಳಿಸಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪ್ರಮಾಣೀಕರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ ಅವರು, ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಅವರು ಸೂಚನೆ ನೀಡಿದರು.
ರಾಜಕಾಲುವೆ, ಚರಂಡಿಗಳು, ರಸ್ತೆ ಬದಿಯ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆದು ಮಳೆ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಅಗೆದು ಬಿಟ್ಟಿರುವ ಮಣ್ಣು ನೀರುಗಾಲುವೆಗಳಿಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
೧೯೮ ವಾರ್ಡ್‌ಗಳಲ್ಲೂ ಆದ್ಯತೆ ಮೇರೆಗೆ ತುರ್ತು ಕಾಮಗಾರಿಗಳನ್ನು ಕೈಗೊಂಡು ತಾವು ಕೈಗೊಂಡ ಕಾಮಗಾರಿಗಳ ಬಗ್ಗೆ ಮುಖ್ಯ ಅಭಿಯಂತರರು ಮೇಲ್ವಿಚಾರಣೆ ನಡೆಸಿ ಕೂಡಲೇ ಮೇಲಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸೂಚಿಸಿದರು.