ರಸ್ತೆ ಅಗೆತ ಗ್ರಾಮಸ್ಥರಿಂದ ಪ್ರತಿಭಟನೆ

ಬ್ಯಾಡಗಿ,ಡಿ2: ತಾಲೂಕಿನ ಶಿಡೇನೂರು ಗ್ರಾಮದ ಶಿವಾಜಿನಗರ ತಾಂಡಾದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಾಡಲಾಗಿದ್ದ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ಗುರುವಾರದಂದು ರಾತ್ರಿ ಏಕಾಏಕಿ ಜೆಸಿಬಿ ಯಂತ್ರದ ಮೂಲಕ ಅಗೆಸಿದ ಪರಿಣಾಮ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯ ಕುರಿತು ತಂಟೆ, ತಕರಾರುಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಜಾಗೆಯ ಮಾಲೀಕರಿಗೆ ಪರಿಹಾರ ಒದಗಿಸುವ ಭರವಸೆ ನೀಡಿ ಲೋಕೋಪಯೋಗಿ ಇಲಾಖೆಯಿಂದ 10 ಅಡಿ ಅಗಲ ಹಾಗೂ 25 ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿತ್ತು. ರಸ್ತೆ ನಿರ್ಮಾಣವಾಗಿರುವ ಜಾಗೆಯ ಮಾಲೀಕರು ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋಲಿನ ಹತಾಶೆಯಿಂದ ಅವರೇ ಈ ರೀತಿ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರೂ ನೇರವಾಗಿ ಆರೋಪ ಮಾಡಲು ಹಿಂದೇಟು ಹಾಕಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಡ್ಡಪ್ಪ ನಾಯಕ, ಈ ಜಾಗೆಯು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ್ದು, ರಸ್ತೆಗಾಗಿ ಅದನ್ನು ಸ್ವಾಧೀನ ಪಡಿಸಿಕೊಂಡು ಅವರಿಗೆ ಸೂಕ್ತ ಭೂಪರಿಹಾರ ಒದಗಿಸುವ ಭರವಸೆ ನೀಡಿ ರಸ್ತೆ ನಿರ್ಮಾಣ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಕಾರಣ ಈ ಸಮಸ್ಯೆಯನ್ನು ಬಗೆಹರಿಸಲು ತಾವು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಶಾಶ್ವತ ಪರಿಹಾರವನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.