
ಅಫಜಲಪುರ:ಆ.24: 2022 – 23 ನೇ ಸಾಲಿನ ಅಮೃತ ನಗರೋತ್ಥಾನ ಹಂತ -4 ರ ಯೋಜನೆಯಲ್ಲಿ ಅಫಜಲಪುರ ಪಟ್ಟಣದ ನಾಕೇದಾರ ಪೆಟ್ರೋಲ್ ಪಂಪಿನಿಂದ ತಹಸೀಲ್ ಕಾರ್ಯಾಲಯದವರೆಗೆ ಆರ್.ಸಿ.ಸಿ ಚರಂಡಿ, ಬಿಟಿ ರಸ್ತೆ, ಡಿವೈಡರ್ ಹಾಗೂ ಸ್ಟ್ರೀಟ್ ಲೈಟ್ ಕಂಬ ಅಳವಡಿಸಲು ಕಾಮಗಾರಿ ಆರಂಭಿಸುವ ಹಿನ್ನೆಲೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.
ನಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಅಶೋಕ ಖಂಡ್ರೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಲು ಪುರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಹೀಗಾಗಿ ವಿದ್ಯುತ್ ಕಂಬ ಹಾಗೂ ಮರಗಳ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಬಳಿಕ ವಿದ್ಯುತ್ ಕಂಬ ಸ್ಥಳಾಂತರಿಸುವ ಕುರಿತು ಅಫಜಲಪುರ ಜೆಸ್ಕಾಂ ಶಾಖಾಧಿಕಾರಿ ಸೈಯದ್ ಇಸಾ ಮಾತನಾಡಿ, 9 ಮೀಟರ್ ಎತ್ತರವಿರುವ ಆರ್.ಸಿ.ಸಿ ವಿದ್ಯುತ್ ಕಂಬಗಳನ್ನು ಪ್ರತಿ 35 ಮೀಟರ್ ಗೆ ಒಂದರಂತೆ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಸುಮಾರು 32 ವಿದ್ಯುತ್ ಕಂಬ ಹಾಗೂ 4 ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಪುರಸಭೆಯವರ ಸೂಚನೆಯ ಮೇರೆಗೆ ಒಳಚರಂಡಿ ಪಕ್ಕದಿಂದ 2 ಅಡಿ ಅಂತರದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುವುದು. ಹೀಗಾಗಿ ಪುರಸಭೆಯವರು ಸ್ಥಳ ಗುರುತಿಸಿದ ನಂತರ ಅಂದಾಜು ಪಟ್ಟಿ ತಯಾರಿಸಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರು.
ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ ಹೆಬ್ಬಾಳ, ಪುರಸಭೆಯ ಕಿರಿಯ ಅಭಿಯಂತರ ಅಜಯ್ ನನ್ನಾ, ಗುತ್ತಿಗೆದಾರ ಮೋಸಿನ್ ಪಟೇಲ್, ಜೆಸ್ಕಾಂ ಸಿಬ್ಬಂದಿ ಮಾಜೀದ್ ಸೋಲಾಪುರ, ಪುರಸಭೆ ಸಿಬ್ಬಂದಿ ಭೀಮಾಶಂಕರ ಪತ್ತಾರ, ಮುಖಂಡ ರಮೇಶ ಪೂಜಾರಿ ಹಾಜರಿದ್ದರು.