ರಸ್ತೆ ಅಗಲೀಕರಣ : ಅಧ್ಯಕ್ಷರು, ಪೌರಾಯುಕ್ತರು ವಿಫಲ – ಎನ್.ಮಹಾವೀರ

ಮಾವಿನ ಕೆರೆ ಅಭಿವೃದ್ಧಿ : ಭಾರೀ ಪ್ರಮಾಣದ ಬಿಲ್ ಎತ್ತುವಳಿ
ರಾಯಚೂರು.ಏ.೦೮- ತೀನ್ ಖಂದೀಲ್ ವೃತ್ತದಿಂದ ಅಶೋಕ ಡಿಪೋವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದು ಹಾಗೂ ಮಾವಿನ ಕೆರೆ ಒತ್ತುವರಿ ಮತ್ತು ಕೆರೆ ಮಾಲಿನ್ಯವನ್ನು ಸ್ವಚ್ಛಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಸಂಪೂರ್ಣ ವಿಫಲವಾಗಿದೆಂದು ರಾಯಚೂರು ನಗರ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎನ್.ಮಹಾವೀರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಗರಸಭೆ ಅಧ್ಯಕ್ಷರು, ಕಳೆದ ನಾಲ್ಕು ತಿಂಗಳಗಳ ಹಿಂದೆ ಅಧಿಕಾರ ಸ್ವೀಕರಿಸಿ, ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ. ಇವರಿಗೆ ಕಾನೂನಿನ ಪರಿಜ್ಞಾನವಿಲ್ಲ. ಇವರು ಸಹ ಇಚ್ಛೆ ಬಂದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ನಗರದ ತೀನ್ ಖಂದೀಲ್ ವೃತ್ತದಿಂದ ಅಶೋಕ ಡಿಪೋ ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಈ ಕುರಿತು ಅಧ್ಯಕ್ಷರು ಮತ್ತು ಪೌರಾಯುಕ್ತರ ನಡುವೆ ಜಗಳ ಪ್ರಾರಂಭವಾಗಿ, ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.
ವಾರ್ಡ್ ೧೨ ಮತ್ತು ೧೪ ರ ನಿವಾಸಿಗಳು ಪ್ರಕರಣವನ್ನು ದಾಖಲಿಸಿ, ಈ ರಸ್ತೆಗೆ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಮುಂದಾಗುತ್ತಿಲ್ಲ. ನಗರಸಭೆಯ ಅಧ್ಯಕ್ಷರು ಕಾನೂನು ಸಲಹೆಗಾರರಾಗಿದ್ದು, ರಸ್ತೆ ಅಗಲೀಕರಣ ಬಗ್ಗೆ ಮಾತನಾಡದಿರುವುದು ಶೋಚನೀಯವಾಗಿದೆ. ಮಾವಿನ ಕೆರೆ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ೧೦ ಕೋಟಿ ಅನುದಾನ ಬಂದಿದ್ದು, ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗುತ್ತಿಲ್ಲ.
ಕೆಲ ಗುತ್ತೇದಾರರು ಎರಡು, ಮೂರು ಜೆಸಿಬಿಗಳನ್ನು ಕೆರೆಯಲ್ಲಿ ನಿಲ್ಲಿಸಿ, ಬಿಲ್ ಎತ್ತುವಳಿ ಮಾಡಲು ಮುಂದಾಗಿದ್ದಾರೆ. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಪ್ರಾರಂಭವಾಗುತ್ತಿಲ್ಲ. ಮಾವಿನ ಕೆರೆಯ ಸುತ್ತಲು ಹೆಚ್ಚಿನ ರೀತಿಯಲ್ಲಿ ಒತ್ತುವರಿಯಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ನಗರಸಭೆ ಪೌರಾಯುಕ್ತರು ಪಶ್ಚಿಮ ಪೊಲೀಸ್ ಠಾಣೆ ಹಾಗೂ ಸದಾರ್ ಬಜಾರ್ ಠಾಣೆಯಲ್ಲಿ ಕೆರೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಂದು ಹೇಳಿದ್ದಾರೆ. ಆದರೆ, ಯಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಂದು ತಿಳಿಸಿಲ್ಲ.
ಕೂಡಲೇ ಕೆರೆ ಒತ್ತುವರಿ ಮಾಡಿಕೊಂಡವರ ಹೆಸರುಗಳನ್ನು ಬಹಿರಂಗಪಡಿಸಿ, ಕೆರೆ ಅಭಿವೃದ್ಧಿ ಮಾಡಲು ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭು ನಾಯಕ, ಎಂ.ಎಸ್.ಖಾನ್, ಬಸವರಾಜ, ಖಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.