ರಸ್ತೆಯ ಬದಿಯ ಅಂಗಡಿಗಳನ್ನು ಸ್ಥಳಾಂತರಿಸಲು ಆಗ್ರಹ

ಮರಿಯಮ್ಮನಹಳ್ಳಿ, ಸೆ.16: ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿರುವ ಚಿಕನ್ ಹಾಗೂ ಮಟನ್ ಮಾರುಕಟ್ಟೆಯ ಅಂಗಡಿಗಳನ್ನು ಸ್ಥಳಾಂತರಿಸಲು ಸಾರ್ವಜನಿಕರು ಆಗ್ರಹಿಸಿದ್ದು, ಈ ಕುರಿತು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮಾತ್ರ ಜಾಣ ನಿದ್ರೆಗೆ ಜಾರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾರಾಯಣದೇವರಕೆರೆ ವೃತ್ತದಿಂದ ಹಗರಿಬೊಮ್ಮನಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ರಸ್ತೆಗೆ ಅಂಟಿಕೊಂಡಿರುವ ಮಾಂಸದಂಗಡಿಗಳಿಂದಾಗಿ ಸಾರ್ವಜನಿಕರು, ದಾರಿಹೋಕರು, ವಾಹನ ಸವಾರರೂ ಸಾಕಷ್ಟು ತೊಂದರೆಗಳಿಗೆ ಸಿಲುಕುತ್ತಿದ್ದಾರೆ. ಮಾಂಸದಂಗಡಿಗಳ ಮುಂದೆ ನಾಯಿಗಳ ಹಿಂಡು ಸದಾ ತಿರುಗಾಡುತ್ತಿರುವುದರಿಂದ ವಾಹನಗಳಿಗೆ ಪದೇ ಪದೇ ಅಡ್ಡಬಂದು ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆಗಳು ಉಂಟಾಗಿವೆ. ಸಣ್ಣಪುಟ್ಟ ಅಪಘಾತಗಳೂ ಆಗಿಂದಾಗ್ಗೆ ಜರುಗುತ್ತಲೇ ಇವೆ.
ಮಾಂಸದಂಗಡಿಯವರು ಕೋಳಿ ಕುರಿಗಳನ್ನು ಕತ್ತರಿಸುವಾಗ ತ್ಯಾಜ್ಯಗಳನ್ನು ರಸ್ತೆಗೆ ಬಿಸಾಡುವುದರಿಂದ ನಾಯಿಗಳು ಗುಂಪು ಗುಂಪಾಗಿ ಕಚ್ಚಾಟಕ್ಕಿಳಿಯುತ್ತವೆ. ಅಲ್ಲದೇ ಈ ವೇಳೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ನಾಯಿಗಳು ಚಕ್ರಕ್ಕೆ ಬಿದ್ದು, ವಾಹನ ಸವಾರರು ಅಪಘಾತಕ್ಕೀಡಾದ ನಿದರ್ಶನಗಳೂ ಇವೆ. ಆದರೆ ಈ ಕುರಿತು ಪ.ಪಂ.ನ ಯಾರೊಬ್ಬರೂ ಕೂಡ ತಮಗೇನೂ ತಿಳಿದಿಲ್ಲ ಮತ್ತು ಸಂಬಂಧವೇ ಇಲ್ಲ ಎನ್ನುವಂತೆ ಕುಳಿತಿದ್ದಾರೆ.
ಜನದಟ್ಟಣೆಯಿಂದ ಕೂಡಿರುವ ಹರಿಹರ ರಸ್ತೆಯಲ್ಲಿ ಮಾಂಸದ ತ್ಯಾಜ್ಯಗಳ ಗಬ್ಬುವಾಸನೆಯಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಮಾಂಸದಂಗಡಿಗಳ ಸ್ಥಳಾಂತರಕ್ಕೆ ಸಾರ್ವಜನಿಕರು ಒತ್ತಾಯಿಸಿದರೂ ಇದುವರೆಗೆ ಪ.ಪಂ.ನ ಸದಸ್ಯರುಗಳು, ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಸ್ಥಳಾಂತರ ಪ್ರಕ್ರಿಯೆಯನ್ನು ಹಾಗೇ ಕೈಬಿಡುತ್ತಾ ಬಂದಿದ್ದಾರೆ.
ಮಾಂಸದಂಗಡಿಗಳಲ್ಲಿ ಮಾಂಸ ತೊಳೆಯಲು ಬೇಕಾದ ನೀರನ್ನು ರೈಸಿಂಗ್ ಪೈಪ್‍ಲೈನ್ ಮೂಲಕವೇ ಪಡೆಯುತ್ತಿದ್ದು, ಬೇರೆಡೆಗೆ ಸ್ಥಳಾಂತರವಾದರೆ ನೀರಿನ ಸಮಸ್ಯೆಯಾಗುವುದರಿಂದ ಮಾಂಸದಂಗಡಿಗಳ ಮಾಲೀಕರು ಸ್ಥಳಾಂತರವಾಗಲು ಸಿದ್ದರಿಲ್ಲ.
ಪಟ್ಟಣದ ಹೊರವಲಯದಲ್ಲಿನ ಜಿ.ಟಿ.ಟಿ.ಸಿ.ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು, ನಾಡಕಛೇರಿ ಇರುವ ಪ್ರದೇಶದಲ್ಲಿ ಹ.ಬೊ.ಹಳ್ಳಿ ರಸ್ತೆಯ ಬದಿಯಲ್ಲಿ ಈ ಮಾಂಸದಂಗಡಿಗಳ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಮಾರ್ಗದ ಸಂಚಾರಿಗಳಿಗೆ, ವಿದ್ಯಾರ್ಥಿಗಳಿಗೆ ಗಬ್ಬು ವಾಸನೆ ನಿತ್ಯವೂ ಮೂಗಿಗೆ ರಾಚುತ್ತಿದೆ.
ಈ ಕುರಿತು ಪ.ಪಂ. ಮುಖ್ಯಾಧಿಕಾರಿ ಉದಯಸಿಂಗ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಮಾರುಕಟ್ಟೆ ಸ್ಥಳಾಂತರ ಮಾಡಲು ಅದಕ್ಕೆ ಬೇರೆಡೆ ಜಾಗ ನಿಗದಿಮಾಡಲು ಶಾಸಕರು ಮುಂದಾಗಿದ್ದರು ಶಾಸಕರು ಮತ್ತೊಮ್ಮೆ ಬಂದು ಸ್ಥಳ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರು ಬಂದು ಸ್ಥಳನಿಗದಿ ಮಾಡುವ ಪ್ರಕ್ರಿಯೆ ಮುಗಿದ ನಂತರ ಮಾಂಸದಂಗಡಿಗಳ ನೂತನ ಮಾರುಕಟ್ಟೆ ಆರಂಭಿಸಲಾಗುವುದು ಎನ್ನುತ್ತಾರೆ.
ಆದಷ್ಟು ಬೇಗ ಮಾಂಸದ ಅಂಗಡಿಮುಂಗಟ್ಟುಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರ ಮಾಡಿ, ಮುಖ್ಯ ರಸ್ತೆಯಲ್ಲಿ ನಾಯಿಗಳ ಹಾವಳಿಯಿಂದ ರಕ್ಷಿಸಬೇಕೆಂದು ಪಟ್ಟಣದ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.