ರಸ್ತೆಯಲ್ಲೇ ನಮಾಜ್ 2 ಸಾವಿರ ಜನರ ವಿರುದ್ಧ ಎಫ್‌ಐಆರ್

ಕಾನ್ಪುರ,ಏ.೩೦- ಈದ್ ಹಬ್ಬದ ವೇಳೆ ಅನುಮತಿ ಪಡೆಯದೆ ರಸ್ತೆಯಲ್ಲಿ ನಮಾಜ್ ಮಾಡಿದ ಕಾರಣಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕಾನ್ಪುರದಲ್ಲಿ ೨ ಸಾವಿರ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಜಾರಿಯಾ, ಬಾಬು ಪೂರ್ವಾ ಮತ್ತು ಜಜ್ಮೌ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಲಾಗಿದ್ದು, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯಲ್ಲಿ ನಮಾಜ್ ಮಾಡಿರುವ ವಿಡಿಯೋಗಳನ್ನು ಸಂಗ್ರಹಿಸಿರುವ ಪೊಲೀಸರು, ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಕೆಲವು ಜನರು ನಮಾಜ್‌ಗೆ ತಡವಾಗಿ ಬಂದಿದ್ದರಿಂದ ಮತ್ತು ಆವರಣದಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ’. ಹಿರಿಯ ಸಬ್ ಇನ್ಸ್ಪೆಕ್ಟರ್ ಓಂವೀರ್ ಸಿಂಗ್ ಅವರ ದೂರಿನ ಮೇರೆಗೆ ಈದ್ಗಾ ನಿರ್ವಹಣಾ ಸಮಿತಿಯ ಕೆಲವು ಸದಸ್ಯರು ಸೇರಿದಂತೆ ೧,೦೦೦-೧,೫೦೦ ಅಪರಿಚಿತ ವ್ಯಕ್ತಿಗಳ ವಿರುದ್ಧ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಸಿದೆ ಎಂದಿದ್ದಾರೆ.
ಈದ್ಗಾ ನಿರ್ವಹಣಾ ಸಮಿತಿಯ ಕೆಲವು ಸದಸ್ಯರ ಜೊತೆಗೆ ೧೦೦೦-೧೫೦೦ ಮಂದಿ ಅಪರಿಚಿತರ ವಿರುದ್ಧ ಸಬ್ ಇನ್ಸ್ಪೆಕ್ಟರ್ ಓಂವೀರ್ ಸಿಂಗ್ ಅವರು ನೀಡಿದ್ದ ಸೂಚನೆಯ ಪ್ರಕಾರ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇನ್ನು ಸುಮಾರು ೩೦೦ ಜನರ ವಿರುದ್ಧ ಜಜ್ಮೌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೆ, ಬಾಬು ಪುರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾದ ೩ನೇ ಎಫ್‌ಐಆರ್ ೫೦ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಶಾಂತಿ ಸಮಿತಿಯ ಜೊತೆ ಪೊಲೀಸರು ಸಭೆ ನಡೆಸಿದ್ದು, ಈದ್ಗಾದಲ್ಲಿ ನಮಾಜ್ ಅಥವಾ ಪ್ರಾರ್ಥನೆ ಸಲ್ಲಿಸುವ ಬಗ್ಗೆ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡುವುದರ ಜೊತೆಗೆ ರಸ್ತೆಯಲ್ಲಿ ನಮಾಜ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.