ರಸ್ತೆಯಲ್ಲೆ ಮಗುವಿಗೆ ಜನ್ಮ

ತಿರುಪತಿ, ನ ೨೨- ಹೆರಿಗೆ ನೋವು ಕಾಣಿಸಿಕೊಂಡು ಗರ್ಭಿಣೆಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾತಿ ಸಿಗದೇ ರಸ್ತೆಯಲ್ಲೇ ಮಗುವಿಗೆ ಜನ್ಮನೀಡಿದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಮಹಿಳೆ ಹೆರಿಗೆ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ಕೆಲವು ಮಹಿಳೆಯರು ಗರ್ಭಿಣಿಯನ್ನು ಮರೆಮಾಚಲು ಬೆಡ್‌ಶೀಟ್‌ಗಳನ್ನು ಹಿಡಿದಿರುವುದನ್ನು ನೋಡಬಹುದು. ಇದೇ ವೇಳೆ ಮಹಿಳೆ ಹೆರಿಗೆ ನೋವಿನಿಂದ ಕಿರುಚುತ್ತಿರುವುದು ಕೇಳಿಬರುತ್ತಿದೆ.
ವಿಷಯ ತಿಳಿದು ಹೆರಿಗೆ ಆಸ್ಪತ್ರೆಯ ವೈದ್ಯರು ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಗೆ ನೆರವು ನೀಡಿದ್ದಾರೆ. ಬಳಿಕ ಮಗು ಹಾಗೂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಸೇವೆ ಒದಗಿಸಿದ್ದಾರೆ.
ತಿರುಪತಿ ನಗರದ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಭಾನುವಾರದಿಂದ ಮಹಿಳೆಯೊಬ್ಬರು ಓಡಾಡುತ್ತಿರುವುದು ಕಂಡು ಬಂದಿದೆ. ಆದರೆ ಗರ್ಭಿಣಿ ಎಂದು ಯಾರೂ ಗುರುತಿಸಲು ಸಾಧ್ಯವಾಗಲಿಲ್ಲ. ಅಲೆದಾಡುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋದಾಗ ಹೆರಿಗೆ ಆಸ್ಪತ್ರೆಯ ಸಿಬ್ಬಂದಿ ಗಾಬರಿಗೊಂಡು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆಕೆಯೊಂದಿಗೆ ಸಹಾಯಕರು ಯಾರೂ ಇರಲಿಲ್ಲ. ಇದರಿಂದ ಮಹಿಳೆ ತಿರುಗಾಡುತ್ತಿದ್ದಾಗ ಸ್ಥಳೀಯರು ಊಟದ ವ್ಯವಸ್ಥೆ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಆಕೆಯ ಹೊಟ್ಟೆಯಿಂದ ಮಗುವಿನ ತಲೆ ಹೊರಬರುವುದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅದೇ ಸಮಯದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ವೈದ್ಯಾಧಿಕಾರಿಗಳು ಪ್ರತಿಕ್ರಿಯಿಸಿ ವೈದ್ಯಕೀಯ ಸೇವೆಗಳನ್ನು ಒದಗಿಸಿದ್ದಾರೆ.
ಇದೀಗ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ.