ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಬರೆಯುತ್ತಿದ್ದ ವೇಳೆ ಕಾರ್ ಡಿಕ್ಕಿ: ಇಬ್ಬರು ಮೃತ್ಯು: ಇನ್ನಿಬ್ಬರಿಗೆ ಗಾಯ


ಕಾರ್ಕಳ, ಜ.೨- ಹೊಸ ವರ್ಷಾಚರಣೆಗೆ ಸ್ವಾಗತ ಕೋರಿ ರಸ್ತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಬರೆಯುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಬಜಗೋಳಿ ಸಮೀಪದ ಮಿಯಾರ್ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.


ಮೃತರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿಗಳಾದ ಶರಣ್ (೨೬) ಮತ್ತು ಸಿದ್ದು (೨೫) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮುದ್ದೇಬಿಹಾಳ ನಿವಾಸಿಗಳಾಗಿರುವ ತೌಸೀಫ್ ಮತ್ತು ಬಸವರಾಜ್ ಎಂಬ ಇನ್ನಿಬ್ಬರು ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ಈ ನಾಲ್ವರು ಯುವಕರು ಗುರುವಾರ ರಾತ್ರಿ ೧೦:೪೫ರ ವೇಳೆ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಆರಂಭಿಸಿದ್ದರು. ಈ ವೇಳೆ ಏಕಾಏಕಿ ಬಂದ ಮಾರುತಿ ಇಕೋ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love