ರಸ್ತೆಯಲ್ಲಿರುವ ಗುಂಡಿಗಳ ಮುಚ್ಚಲು ಒತ್ತಾಯ

ದಾವಣಗೆರೆ.ಜ.೯; ನಿನ್ನೆ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ, ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದೆ ಸಾರ್ವಜನಿಕರು ನೀರು ತುಂಬಿದ ಗುಂಡಿಗಳಲ್ಲಿ ಬಿದ್ದು ಪಾಲಿಕೆಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬರುತ್ತಿತ್ತು.ನಗರದ ಜನತೆಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಅವರ ಜೀವ ರಕ್ಷಣೆ ಮಾಡುವುದು ಮುಖ್ಯವೇ ಹೊರತು, ಕೇವಲ ಪ್ರಚಾರಕ್ಕಾಗಿ ಮನೆಯ ಬಾಗಿಲಿಗೆ ಮಹಾನಗರಪಾಲಿಕೆ ಎಂಬ ಯೋಜನೆಯಲ್ಲ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಪಾಲಿಕೆ ಮಹಾಪೌರರಿಗೆ ಆಗ್ರಹಿಸಿದರು.
ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ಯೋಚನೆಯಿಂದ ಪಾಲಿಕೆಗೆ ಬಂದ ಆದಾಯವೆಷ್ಟು ಖರ್ಚು ಎಷ್ಟು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವರಂತೆ, ಈಗ ದಯಮಾಡಿ ನಗರದಲ್ಲಿರುವ ಚರಂಡಿಯಲ್ಲಿರುವ ಹೂಳನ್ನು ತೆಗೆದು, ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.