ರಸ್ತೆಗೆ ಬರುವವರ ಕೋವಿಡ್ ಟೆಸ್ಟ್ ವರದಿ ಪರಿಶೀಲಿಸಲು ಮನವಿ

ದಾವಣಗೆರೆ,ಮೇ.29: ಲಾಕ್‌ಡೌನ್ ವೇಳೆಯಲ್ಲಿ ರಸ್ತೆಯಲ್ಲಿ ವಾಹನಗಳಲ್ಲಿ ತಿರುಗಾಡುವವರನ್ನು ಪೊಲೀಸರು ತಡೆದು, ತಪಾಸಣೆ ನಡೆಸುವಾಗ ನಮಗೆ ಕೋವಿಡ್ ಇದೆ ಎಂದು ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗೆ ಹೇಳುವವರ ಕೋವಿಡ್ ಟೆಸ್ಟ್ ವರದಿ ಪರಿಶೀಲಿಸಲು ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೋವಿಡ್ ದೃಢಪಟ್ಟ ಬಗ್ಗೆ ಸೋಂಕಿತರ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದ್ದು, ಆ ಸಂದೇಶವನ್ನು ವಾಹನ ತಪಾಸಣೆಯಲ್ಲಿ ತೊಡಗುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲಿಸಿ, ಸುಳ್ಳು ಹೇಳಿಕೊಂಡು ನನಗೆ ಪಾಸಿಟಿವ್ ಬಂದಿದೆ ಎಂಬ ನೆಪ ಹೇಳಿಕೊಂಡು ರಸ್ತೆಯಲ್ಲಿ ತಿರುಗಾಡುವವರಿಗೆ ಕಡಿವಾಣ ಹಾಕಲು ಎಸ್ಪಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ಗೆ ತುತ್ತಾಗಿರುವ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲಾಗುವುದು. ಆದರೆ, ನಗರ ಪ್ರದೇಶದಲ್ಲಿ ಕೋವಿಡ್ ತಗಲಿರುವವರ ಮನೆಗೆ ಹೋಂ ಐಸೋಲೇಷನ್ ತಂಡ ಭೇಟಿ ನೀಡಿ, ಅವರ ಮನೆಯಲ್ಲಿ ಸೋಂಕಿತ ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿ, ವ್ಯವಸ್ಥೆ ಇದ್ದರೆ ಮಾತ್ರ ಹೋಂ ಐಸೋಲೇಷನ್‌ಗೆ ಒಳಪಡಲು ನಿರ್ದೇಶನ ನೀಡಲಿದೆ. ಇಲ್ಲದಿದ್ದರೆ, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ಸೂಚನೆ ನೀಡಲಿದೆ. ಸೋಂಕಿತರಿಗೆ ಸ್ವಂತ ವಾಹನ ಇದ್ದರೆ ಅವರ ವಾಹನದಲ್ಲಿ ಬರಬಹುದು. ವಾಹನ ವ್ಯವಸ್ಥೆ ಇಲ್ಲದಿದ್ದರೆ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.