ರಸ್ತೆಗೆ ಇಳಿಯುತ್ತಿರುವ ಸಾರಿಗೆ ಬಸ್‍ಗಳು… ಸೇವೆಗೆ ಹಾಜರಾಗುತ್ತಿರುವ ನೌಕರರು

ಕಲಬುರಗಿ,ಏ.21- ಎಂದಿಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‍ಗಳು ರಸ್ತೆಗೆ ಇಳಿದಿರುವ ದೃಷ್ಯ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ನೌಕರರ ಕಳೆದ ಏ.7ರಿಂದ ಪ್ರಾರಂಭಿಸಿರುವ ಮುಷ್ಕರ ಇಂದು ಸಹ ಮುಂದುವರೆದಿದ್ದರೂ, ಸಹ ಎಂದಿನಂತೆ ಇಂದು ಸಾರಿಗೆ ಬಸ್‍ಗಳ ಓಡಾಟ ತುಸು ಹೆಚ್ಚಿಗೆ ಕಾಣಿಸಿತು.
ಇಂದು ಮಧ್ಯಾಹ್ನ 1-30ರ ವರೆಗೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ನೆರೆಯ ಜಿಲ್ಲೆ ಮತ್ತು ಸುತ್ತಲಿನ ತಾಲೂಕು ಕೇಂದ್ರಗಳಿಗೆ 40 ಸಾರಿಗೆ ಬಸ್‍ಗಳ ಸೇವೆ ಪ್ರಾರಂಭಿಸಿರುವ ಕುರಿತು ಸಂಜೆವಾಣಿ ಮಾಹಿತಿ ಕಲೆಹಾಕಿತು.
ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರನ್ನು ಮುಷ್ಕರದ ಕುರಿತು ವಿಚಾರಿಸಿದರೆ ತಮ್ಮ ಮುಷ್ಕರ ಅಂತ್ಯವಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರ ಅವರಿಂದ ಕೇಳಿಬಂತು.
ಕೋವಿಡ್-19 ಸಂಕಷ್ಟದ ಈ ಸಂದರ್ಭದಲ್ಲಿ ಕೈಗೊಂಡಿರುವ ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯದ ಹೈಕೋರ್ಟ ತಕ್ಷಣ ಮುಷ್ಕರ ನಿಲ್ಲಿಸಿ ಬಸ್ ಸೇವೆಗೆ ಹಾಜರಾಗಲು ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಹಾಗೂ ಇಂದು ಸಂಜೆಯ ವೇಳೆಗೆ ಮುಷ್ಕರ ನಿರತರ ಮತ್ತು ಸರ್ಕಾರದ ನಡುವೆ ಮಾತುಕತೆ ನಡೆದು ಅಂತಿಮ ತಿರ್ಮಾನ ಆಗುವ ಸಾಧ್ಯತೆಯೂ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಇಂದು ಎಂದಿನಂತೆ ಇಲ್ಲಿನ ಸಾರಿಗೆ ನೌಕರರು ತಮ್ಮ ಸೇವೆಗೆ ಹೆಚ್ಚಿನ ಸಂಖ್ಯೆಗಳಲ್ಲಿ ಹಾಜರಾಗುತ್ತಿರುವುದು ಸಹ ಕಂಡು ಬಂದಿತು.