ರಸ್ತೆಗುಂಡಿ ಮುಚ್ಚುವ ಕಾರ್‍ಯ ಬಿರುಸು

ಬೆಂಗಳೂರು, ನ.೮- ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗಡುವು ಮತ್ತಷ್ಟು ದಿನ ವಿಸ್ತರಣೆ ಮಾಡಲಾಗಿದ್ದು, ಈ ನಡುವೆ ಅಲ್ಲಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.
ರಸ್ತೆ ಗುಂಡಿಗಳ ವಿಚಾರವಾಗಿ ಹೈಕೋರ್ಟ್ ತರಾಟೆ ಬಳಿಕ ಬಿಬಿಎಂಪಿ ಮತ್ತಷ್ಟು ಎಚ್ಚೆತ್ತುಕೊಂಡಿದ್ದು, ನವೆಂಬರ್ ೧೫ಕ್ಕೆ ಎಲ್ಲ ರಸ್ತೆ ಗುಂಡಿ ಗಳನ್ನು ಮುಚ್ಚುವಂತೆ ಪಾಲಿಕೆ ಇಂಜಿನಿಯರ್ ಗಳಿಗೆ ಗುರಿ ನೀಡಲಾಗಿದೆ.
ಪಾಲಿಕೆಯಿಂದ ಪ್ರತಿ ದಿನ ಒಂದು ಸಾವಿರದಿಂದ ಒಂದುವರೆ ಸಾವಿರ ಗುಂಡಿಗಳನ್ನು ಮುಚ್ಚುವ ಗುರಿಯೂ ನೀಡಲಾಗಿದೆ. ಬೆಂಗಳೂರಿನಲ್ಲಿ ಕಳೆದ ವಾರ ಮಳೆ ಇದ್ದ ಹಿನ್ನೆಲೆ ನಿರ್ದಿಷ್ಟ ಗುರಿ ಮುಟ್ಟಲು ಆಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಹಿಂದೆ ಆಯುಕ್ತರು ನವೆಂಬರ್ ೧೦ರೊಳಗೆ ಗುಂಡಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು.ಈಗ ನವೆಂಬರ್ ೧೫ಕ್ಕೆ ಗುಂಡಿ ಮುಚ್ಚಲು ಗಡುವು ವಿಸ್ತರಿಸಲಾಗಿದೆ. ಒಂದು ವೇಳೆ ಗಡುವು ಮೀರಿದರೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.