ರಸ್ತೆಗುಂಡಿ ಮುಚ್ಚಲು ಆಗ್ರಹಿಸಿ ಬಿಬಿಎಂಪಿ ಅಣಕು ಶವಯಾತ್ರೆ

ಬೆಂಗಳೂರು,ನ.೨೬- ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಪಾಲಿಕೆಯ ಪ್ರತಿಕೃತಿ ಅಣುಕು ಶವಯಾತ್ರೆ ನಡೆಸುವ ಮೂಲಕ ಹಲವು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿಂದು ಸುಂಕದ ಕಟ್ಟೆ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಬಿಬಿಎಂಪಿ ಪ್ರತಿಕೃತಿಯ ಅಣುಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಪ್ರತಿಕೃತಿ ರಸ್ತೆಯ ಗುಂಡಿಗೆ ಹಾಕಿ ಮಡಿಕೆ ಒಡೆದು ತಲೆಬೋಳಿಸಿದರು.
ಈಗಾಗಲೇ ಹಲವಾರು ಗುಂಡಿಯಲ್ಲಿ ಬಿದ್ದು, ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ, ವಾಹನ ಸವಾರರ, ಪಾದಚಾರಿಗಳ ಹಿತದೃಷ್ಟಿಯಿಂದ ರಸ್ತೆ ಗುಂಡಿ ಮುಚ್ಚಬೇಕು ಎಂದು ಪ್ರತಿಭಟನಾಕಾರರು ಬಿಬಿಎಂಪಿಯನ್ನು ಆಗ್ರಹಿಸಿದರು.
ಮುಖ್ಯಮಂತ್ರಿ, ಸಚಿವರು ಸೇರಿ ಶಾಸಕರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗದವರು ಈ ಬೆಂಗಳೂರಿನ ಮಾರ್ಗದಲ್ಲಿ ಸಂಚರಿಸಿದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಇದು ಸಾಂಕೇತಿಕ ಹೋರಾಟವಾಗಿದ್ದು, ಇನ್ನೊಂದು ವಾರದಲ್ಲಿ ಗುಂಡಿ ಮುಚ್ಚುವ ಪ್ರಕ್ರಿಯೆಗೆ ಬಿಬಿಎಂಪಿ ಮುಂದಾಗದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಸ್ತೆ ಮಧ್ಯೆ ಕುಳಿತು ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.