ರಸ್ತೆಗಿಳಿದ 14 ಕೆಎಸ್ಸಾರ್ಟಿಸಿ ಬಸ್‌ಗಳು

ತುಮಕೂರು, ಏ. ೧೧- ಕಳೆದ ೫ ದಿನಗಳಿಂದ ನಡೆಯುತ್ತಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ೧೪ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಆರಂಭಿಸಿವೆ.
ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಇಂದು ೫ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮುಷ್ಕರದ ನಡುವೆಯೂ ನಿನ್ನೆಯಿಂದ ತುಮಕೂರು ಡಿಪೋದಲ್ಲಿ ಕೆಲ ಬಸ್‌ಗಳು ಕಾರ್ಯಾರಂಭ ಮಾಡಿವೆ. ಇಂದು ಬೆಳಿಗ್ಗೆ ೧೧ ಗಂಟೆ ವೇಳೆಗೆ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ೧೪ ಬಸ್‌ಗಳು ಜಿಲ್ಲೆಯ ವಿವಿಧೆಡೆ ಪ್ರಯಾಣಿಕರನ್ನು ಕರೆದೊಯ್ದಿವೆ.
ಬಸ್ ಚಾಲಕರು ಮತ್ತು ನಿರ್ವಾಹಕರ ಮನವೊಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ಮನವರಿಕೆಯಾದವರು ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನೌಕರರ ಮನವೊಲಿಕೆ ಕಾರ್ಯ ಇನ್ನೂ ಮುಂದುವರೆದಿದ್ದು, ಇಂದು ಮಧ್ಯಾಹ್ನ, ಸಂಜೆ ವೇಳೆ ಇನ್ನಷ್ಟು ಬಸ್‌ಗಳು ಸಂಚಾರ ಆರಂಭಿಸುವ ವಿಶ್ವಾಸವನ್ನು ಕೆಎಸ್ಸಾರ್ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ವ್ಯಕ್ತಪಡಿಸಿದರು.
ನಿನ್ನೆ ತುಮಕೂರು ಡಿಪೋದಿಂದ ೮, ತುಮಕೂರು ೨ನೇ ಡಿಪೋದಿಂದ ೭, ತಿಪಟೂರಿನಿಂದ ೩, ತುರುವೇಕೆರೆಯಿಂದ ೩, ಕುಣಿಗಲ್‌ನಿಂದ ೫, ಸಿರಾದಿಂದ ೬, ಮಧುಗಿರಿಯಿಂದ ೫ ಬಸ್‌ಗಳು ಸೇರಿದಂತ ಒಟ್ಟು ೩೯ ಸಾರಿಗೆ ಬಸ್‌ಗಳು ರಸ್ತೆಗಿಳಿದಿದ್ದವು. ಆದರೆ ಇಂದು ಬೆಳಿಗ್ಗೆ ೧೧ ಗಂಟೆ ವೇಳೆಗೆ ೧೪ ಬಸ್‌ಗಳು ಕಾರ್ಯಾರಂಭ ಮಾಡಿದ್ದು, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಆಯಾ ಊರುಗಳಿಗೆ ತೆರಳುತ್ತಿವೆ ಎಂದು ಅವರು “ಸಂಜೆವಾಣಿ”ಗೆ ತಿಳಿಸಿದರು.
ಇಂದು ಭಾನುವಾರ ರಜೆ ದಿನವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದ್ದು, ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಆಯಾ ಊರುಗಳತ್ತ ಬಸ್‌ಗಳು ಪ್ರಯಾಣ ಬೆಳೆಸಲಿವೆ ಎಂದರು.

ಮುಷ್ಕರದಿಂದ ೨.೪೦ ಕೋಟಿ ರೂ. ನಷ್ಟ
ಕಳೆದ ೫ ದಿನಗಳಿಂದ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಸುಮಾರು ೨.೪೦ ಕೋಟಿ ರೂ. ನಷ್ಟ ಸಂಭವಿಸಿದೆ.
ಪ್ರತಿದಿನ ಸರಾಸರಿ ೬೦ ಲಕ್ಷದಂತೆ ೪ ದಿನಗಳಿಗೆ ೨.೪೦ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜು ಹೇಳಿದರು.
ನೌಕರರು ಸರ್ಕಾರದ ಮಾತಿಗೆ ಬೆಲೆ ಕೊಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಅವರ ಮನವೊಲಿಸುವ ಕಾರ್ಯವನ್ನು ನಾವು ಸಹ ನಿರಂತರವಾಗಿ ಮಾಡುತ್ತಿದ್ದೇವೆ. ಇಂದು ಸಂಜೆ ವೇಳೆಗೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸ ತಮಗಿದೆ ಎಂದರು.