ರಸ್ತೆಗಿಳಿದು ಕೊರೊನಾ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ, ಆಯುಕ್ತರು

ಧಾರವಾಡ,ಏ19: ಇತ್ತೀಚೆಗೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಪೊಲೀಸ್ ಆಯುಕ್ತರಾದ ಲಾಬುರಾಮ್ ಅವರು ಖುದ್ದಾಗಿ ರಸ್ತೆಗಿಳಿದು ಸಾರ್ವಜನಿಕರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಮುಂದಾದರು.
ಜಿಲ್ಲಾಡಳಿತದಿಂದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ನಗರದ ಸುಭಾಶ ರಸ್ತೆ, ಟಿಕಾರೆ ರಸ್ತೆ, ವಿಜಯ ರಸ್ತೆ, ಜ್ಯೂಬಲಿ ಸರ್ಕಲ್, ಶಿವಾಜಿ ಸರ್ಕಲ್‍ಗಳಲ್ಲಿ ಸಂಚರಿಸಿ ಕೋವಿಡ್-19 ರ ಮುಂಜಾಗೃತಾ ಕ್ರಮದ ಬಗ್ಗೆ ತಿಳುವಳಿಕೆ ಮೂಡಿಸಿದರು.
ಸಾರ್ವಜನಿಕರಿಗೆ ಮಾಸ್ಕ್‍ಗಳನ್ನು ಕೊಟ್ಟು, ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಸಮಾಧಾನದಿಂದ ಎಚ್ಚರಿಕೆ ನೀಡುವ ಜೊತೆಗೆ, ಕೊರೊನಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಜನತೆ ಸರ್ಕಾರ ರೂಪಿಸಿದ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕರೆ ನೀಡಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಮನವಿ ಮಾಡಿಕೊಂಡ ಪೆÇಲೀಸ್ ಕಮೀಷನರ್ ಲಾಬುರಾಮ್ ಅವರು, ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು.
ಧಾರವಾಡ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜನಜಾಗೃತಿ ಮಾಡಲು ಮುಂದಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬರುವ ಗ್ರಾಮೀಣ ಪ್ರದೇಶದ ಜನರಿಗೆ ತಿಳುವಳಿಕೆ ನೀಡುವುದಕ್ಕೂ ಜಿಲ್ಲಾಡಳಿತ ಮುಂದಾಗಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.