ರಸ್ತೆಗಿಳಿದು ಕರ್ಫ್ಯೂ ಪರಿಶೀಲಿಸಿದ ಪಂತ್


ಬೆಂಗಳೂರು,ಏ.೨೪-ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ಮೇಲೆ ನಿಗಾ ವಹಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹಿರಿಯ ಅಧಿಕಾರಿಗಳ ಜೊತೆ ರಸ್ತೆಗಿಳಿದು ಪರಿಶೀಲನೆ ನಡೆಸಿದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.ಅದಾಗ್ಯೂ ನಗರದಲ್ಲಿ ವಾಹನ ಸಂಚಾರ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಿನ್ನಲೆಯಲ್ಲಿ ಕಮೀಷನರ್ ಕಮಲ್ ಪಂತ್ ಅವರು ಡಿಸಿಪಿ ಡಾ.ಸಂಜೀವ್ ಪಾಟೀಲ್ ಇನ್ನಿತರ ಅಧಿಕಾರಿಗಳ ಜೊತೆ ಸಿಟಿ ಮಾರುಕಟ್ಟೆಗೆ ಧಾವಿಸಿ ಪರಿಶೀಲನೆ ಕೈಗೊಂಡರು.
ಈ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ವಾರಾಂತ್ಯದ ಕರ್ಫ್ಯೂಗೆ ನಗರದ ಶೇ ೯೦ರಷ್ಟು ಜನತೆ ಸಹಕರಿಸಿದ್ದಾರೆ ಆದರೂ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಡಲಾಗಿದೆ ಎಂದರು.
ಅನಗತ್ಯವಾಗಿ ರಸ್ತೆಗೆ ಬರುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಸೂಕ್ತ ಕಾರಣ ನೀಡಿದರೆ ವಾಹನಗಳನ್ನು ಬಿಡಲಾಗುತ್ತಿದೆ ಇಲ್ಲದಿದ್ದರೆ ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದ ಎಲ್ಲಾ ರಸ್ತೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪಡೆಯ ಪೊಲೀಸರನ್ನು ಹಾಗೂ ಸ್ವಯಂಸೇವಕರನ್ನೂ ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ.
ಆಯಾ ವಿಭಾಗಗಳ ಭದ್ರತೆ ಹಾಗೂ ಇತರೆ ಕ್ರಮಗಳ ಜವಾಬ್ದಾರಿಯನ್ನು ಡಿಸಿಪಿಗಳಿಗೆ ವಹಿಸಲಾಗಿದೆ. ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ಸಭೆ ನಡೆಸಿರುವ ಡಿಸಿಪಿಗಳು, ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗಲಿರುವ ಪೊಲೀಸರು, ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದರು.
ಕೆಲ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಅಂಥವರ ಹೆಸರಿನಲ್ಲಿ ಯಾರಾದರೂ ವೇಷ ಮರೆಸಿಕೊಂಡು ಅನಗತ್ಯವಾಗಿ ಓಡಾಡಿದರೆ ಬಂಧಿಸಲಾಗುವುದು’ ಎಂದು ಎಚ್ಚರಿಸಿದರು.
‘ಕಳೆದ ಬಾರಿ ಲಾಕ್‌ಡೌನ್ ವೇಳೆ ಆಹಾರ ಪೂರೈಕೆ ಮಾಡುವ ಕಂಪನಿಗಳ ಸಿಬ್ಬಂದಿ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕಂಪನಿಗೆ ಸಂಬಂಧವೇ ಇಲ್ಲದವರು ಟೀಶರ್ಟ್ ಹಾಕಿಕೊಂಡು ಓಡಾಡಿದ್ದರು. ಪೊಲೀಸರ ದಿಕ್ಕು ತಪ್ಪಿಸಿದ್ದಾರೆ. ಈ ಬಾರಿ ಆ ರೀತಿಯಾಗಲು ಬಿಡುವುದಿಲ್ಲ. ಯಾರಾದರೂ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ಕಠಿಣ ಕ್ರಮ ನಿಶ್ಚಿತ’ ಎಂದೂ ಹೇಳಿದರು.
‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರು, ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯವರು ಶ್ರಮ ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾರಾದರೂ ಚೇಷ್ಟೆ ಮಾಡಲು ರಸ್ತೆಗೆ ಬಂದರೆ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ವಾಹನಗಳನ್ನೂ ಜಪ್ತಿ ಮಾಡಲಾಗುವುದು’ ಎಂದೂ ಅವರು ಎಚ್ಚರಿಸಿದರು.
‘ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಶನಿವಾರ ಹಾಗೂ ಭಾನುವಾರ ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕಾರ ನೀಡಬೇಕು. ಸರ್ಕಾರ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ಹಾಗೂ ಸರ್ಕಾರ ನಿಯಮಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಕೊರೊನಾ ವಿರುದ್ಧ ಹೋರಾಡೋಣ’ ಎಂದೂ ಹೇಳಿದರು.