ರಸ್ತೆಗಳ ದುರಸ್ತಿಗೆ ಆಗ್ರಹ


ಹುಬ್ಬಳ್ಳಿ, ನ 21: ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯ ಪ್ರಮುಖ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿಹೊಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಜನತೆ ಶೀಘ್ರ ರಸ್ತೆ ದುರಸ್ತಿ ಹಾಗೂ ಚರಂಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷವೂ ಭಾರೀ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದು, ಕೊಪ್ಪಿಕರ್ ರಸ್ತೆ, ಗೋಕುಲ ರಸ್ತೆ, ಕಿಮ್ಸ್ ರಸ್ತೆ, ಹಳೇ ಹುಬ್ಬಳ್ಳಿ, ಸಿಬಿಟಿ ರಸ್ತೆ ಸೇರಿದಂತೆ ವಿವಿಧೆಡೆ ವಾಹನ ಸವಾರರು ಪ್ರಾಣ ಭೀತಿಯಿಂದ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ದೇಶಪಾಂಡೆ ನಗರದ ರಾಜಕಾಲುವೆಯೂ ಕೂಡ ಭಾರೀ ಮಳೆಯಿಂದಾಗಿ ಅಕ್ಕ ಪಕ್ಕದ ಪ್ರದೇಶಗಳಲ್ಲಿನ ಕಸದ ರಾಶಿಗಳು ಇಲ್ಲಿನ ರಾಜಕಾಲುವೆಗೆ ಅಪಾರ ಪ್ರಮಾಣದಲ್ಲಿ ಸೇರುತ್ತಿದ್ದು, ಇದರಿಂದಾಗಿ ದುರ್ವಾಸನೆ ಬೀರುತ್ತಿದ್ದು ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸುವ ದುಸ್ಥಿತಿ ಕಂಡುಬಂದಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಜನತೆ ಒತ್ತಾಯಿಸಿದ್ದಾರೆ.