ರಸ್ತೆಗಳ ಅವ್ಯವಸ್ಥೆ: ಜನರ ಹಿಡಿಶಾಪ

ಲಕ್ಷ್ಮೇಶ್ವರ,ಜೂ29: ಶಿರಹಟ್ಟಿ ಉಪ ವಿಭಾಗದ ಲೋಕೋಪಯೋಗಿ ಇಲಾಖೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಬರುವ ಈ ಇಲಾಖೆಯ ಯಾವ ರಸ್ತೆಗಳು ಸರಿಯಾಗಿದೆ ಎಂಬುದನ್ನು ಪತ್ತೆಹಚ್ಚಲು ನೀವೇನು ಶ್ರಮ ಪಡಬೇಕಾಗಿಲ್ಲ ಒಂದು ಕ್ಷಣ ನಿಮ್ಮ ಕಾರೋ ಅಥವಾ ಮೋಟರ ಸೈಕಲ್ಲು ತೆಗೆದುಕೊಂಡು ಹೋದರೆ ಎದೆ ಝಲ್ ಎನ್ನುತ್ತದೆ.
ಯಾವುದೇ ದಾರಿಗೆ ಹೋದರು ಈ ಊರಿಗೆ ದಾರಿ ಯಾವುದಯ್ಯ ಎಂಬಂತ ಸ್ಥಿತಿ ಇದೆ ದೊಡ್ಡೂರು ಸುರಣಿಗಿ ಲಕ್ಷ್ಮೇಶ್ವರ ದೊಡ್ಡೂರು ಸೂರಣಗಿ ಹೀಗೆ ಅನೇಕ ರಸ್ತೆಗಳನ್ನು ಹೆಸರಿಸಬಹುದು. ರಸ್ತೆಗಳ ದುರಸ್ತಿಗೆ ಗುಂಡಿ ಮುಚ್ಚಲು ಸರ್ಕಾರದಿಂದ ಹಣವೇ ಬಂದಿಲ್ಲ ಎನ್ನುವಂತಿಲ್ಲ ಬಂದ ಹಣ ಸಾರ್ಥಕವಾಗದೆ ಇಲಾಖೆಯ ಜವಾಬ್ದಾರಿ ನಿರ್ಲಕ್ಷದಿಂದ ಯಾರದ್ದೋ ಪಾಲಾಗುತ್ತಿದೆ ಎಂಬುದಕ್ಕೆ ಗುಂಡಿಗಳೇ ಸಾಕ್ಷಿಯಾಗಿವೆ.
ಸೂರಣಗಿ ಕ್ರಾಸಿನಿಂದ ಬಾಲೆ ಹೊಸೂರು ವರೆಗಿನ ರಸ್ತೆ ಸ್ಥಿತಿ ಅಯ್ಯೋಮಯವಾಗಿದೆ ಒಂದು ಕ್ಷಣ ವಾಹನ ಚಾಲಕರು ನಿರ್ಲಕ್ಷ್ಯ ಮಾಡಿದರು ಆಸ್ಪತ್ರೆ ಯೇ ಗತಿ ಎನ್ನುವಂತಿದೆ.
ಹಿಡಿ ಮಣ್ಣು ಹಾಕದಿರುವುದರಿಂದ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಕಾಣಿಸಿಕೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದು ಇಷ್ಟಕ್ಕೂ ನಿಲ್ಲದೆ ಬಾಲೆಹೊಸೂರಿನಿಂದ ಶಿರಹಟ್ಟಿ ಹದ್ದಿನವರೆಗೂ ರಸ್ತೆಯೆ ಇಲ್ಲ ಎನ್ನುವ ಸ್ಥಿತಿ ಇದೆ.
ಬಾಲೆಹಸೂರಿನ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈ ಕೂಡಲೇ ಕೊನೆಯ ಪಕ್ಷ ಗುಂಡಿಗಳಿಗೆ ಮಣ್ಣುಗಳನ್ನು ಹಾಕಿ ಸಂಚಾರಕ್ಕಾದರೂ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.