ರಸಾಯನಶಾಸ್ತ್ರ ಪ್ರಾಯೋಗಾಲಯವು ಸಂಶೋಧನಾ ಕೇಂದ್ರವಾಗಿ ಗುರುತಿಸಲಿ

ರಾಯಚೂರು,ನ.೦೪: ರಸಾಯನಶಾಸ್ತ್ರ ಪ್ರಾಯೋಗಾಲಯವು ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿ ಗುರುತಿಸುವಂತಾಗಬೇಕು ಎಂಬುದು ನನ್ನ ಹೆಬ್ಬಯಕೆಯಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಯೋಗಾಲವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಧ್ಯಾಪಕರು ನಿರಂತರವಾಗಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೂ ಕೂಡ ಸಂಶೋಧನೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾ ಈ ಪ್ರಾಯೋಗಾಲಯವು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಸಂಶೋಧನೆಗಳ ಮೂಲಕ ಗುರುತಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾವಿವಿ ಕುಲಸಚಿವ ಪ್ರೊ.ವಿಶ್ವನಾಥ ಎಂ. ಅವರು ಮಾತನಾಡಿ, ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯಾದ ಪ್ರಥಮ ವರ್ಷದಲ್ಲೇ ರಸಾಯನಶಾಸ್ತ್ರ ಪ್ರಯೋಗಾಲಯ ಸ್ಥಾಪನೆ ಆಗಿರುವುದು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮೊದಲ ಆದ್ಯತೆ ಎನ್ನುವುದನ್ನು ನಿರೂಪಿಸುತ್ತದೆ. ನೂತನವಾಗಿ ಪ್ರಾರಂಭವಾದ ಈ ವಿಶ್ವವಿದ್ಯಾಲಯದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಕುಲಪತಿಗಳ ಮಾರ್ಗದರ್ಶನದಲ್ಲಿ ಎಲ್ಲಾ ವಿಭಾಗಗಳಿಗೂ ಕೂಡ ಮೂಲ ಸೌಕರ್ಯ ಒದಗಿಸುವಲ್ಲಿ ಸದಾ ಪ್ರಯತ್ನಶೀಲರಾಗಿದ್ದು, ಸಾಕಷ್ಟು ಕೆಲಸಗಳು ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಅವರು ತಿಳಿಸಿದರು.
ರಾವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ. ಅವರು ಮಾತನಾಡಿ, ರಸಾಯನಶಾಸ್ತ್ರ ವಿಷಯ ಪರೀಕ್ಷೆ ಮತ್ತು ಪ್ರಯೋಗಗಳನ್ನು ಕೈಗೊಳ್ಳಲು ಬೇರೆ ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರು ತೊಂದರೆ ಅನುಭವಿಸುತ್ತಿದ್ದರು, ಆದರೆ ಈ ತೊಂದರೆ ನಿವಾರಿಸಲು ಬಂದಿರುವ ಅನುದಾನದಲ್ಲಿ ಮೊದಲ ಆಧ್ಯತೆ ನೀಡಿ ಈ ಪ್ರಯೋಗಾಲಯವನ್ನು ಸ್ಥಾಪನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಕರುಗಳಿಗೆ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಪ್ರಯೋಗಗಳು ಹಾಗೂ ಪರೀಕ್ಷೆಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಉಪಕರಣಗಳು ಹಾಗೂ ಸಂಬಂಧಪಟ್ಟ ರಸಾಯಿನಿಕಗಳು ಒದಗಿಸಲಾಗಿದೆ ಇದನ್ನು ವಿದ್ಯಾರ್ಥಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಉಪಕರಣಾತ್ಮಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಪಕ ಹಾಗೂ ಡೀನ್‌ರಾದ ಪ್ರೊ.ಪಿ.ಭಾಸ್ಕರ್ ಅವರು ಮಾತನಾಡಿ, ರಸಾಯನಶಾಸ್ತ್ರ ವಿಭಾಗಕ್ಕೆ ವಿಶ್ವಮಾನ್ಯ ದರ್ಜೆಯ ಪ್ರಾಯೋಗಾಲಯ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳ ಅಧ್ಯಯನ ಹಿತ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆಯಾಗಿದ್ದು, ಮುಂಬರುವ ದಿನಗಳಲ್ಲಿ ವಿಜ್ಞಾನ ವಿಯಗಳಿಗೆ ಸಂಬಂಧಪಟ್ಟ ಪ್ರಯೋಗಾಲಯಗಳು ಸ್ಥಾಪಿಸುವ ಅಗತ್ಯತೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಉಪಕರಣಾತ್ಮಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥರು ಹಾಗೂ ಡೀನ್‌ರಾದ ಪ್ರೊ.ಪಾರ್ವತಿ ಸಿ.ಎಸ್., ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ರಸಾಯನಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ರಾಜೇಶ ಜಿ.ಹೆಚ್, ಡಾ.ವಿಜಯಲಕ್ಷ್ಮೀ, ಉತ್ತಮ ಚವ್ಹಾಣ, ಶಿವಲೀಲಾ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಫಜಲೂನ್ನಿಸಾ ಬೇಗಂ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಸುಧಾ ಸರೋದಯ ನಿರೂಪಿಸಿದರು. ಭರತ್ ಕುಮಾರ ವಂದಿಸಿದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.