ರಸಪ್ರಶ್ನೆಯಿಂದ ಜ್ಞಾನ ವೃದ್ಧಿ: ಶುಭ

ಕಲಬುರಗಿ,ಡಿ.26-ರಸಪ್ರಶ್ನೆಯಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ, ದೂರದೃಷ್ಟಿ ಮತ್ತು ಹೊಸ ಹೊಸ ಅನುಭವಗಳನ್ನು ಕಲಿಯಲು ಸಾಧ್ಯವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಹೇಳಿದರು.
ನಗರದ ಏಷಿಯನ್ ಮಹಲ್ ಹತ್ತಿರದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ,ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಸಪ್ರಶ್ನೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಸಪ್ರಶ್ನೆಯಂತ ಕಾರ್ಯಕ್ರಮಗಳು ಧೈರ್ಯ, ಸ್ಫೂರ್ತಿ ನೀಡಿ ಬದುಕನ್ನು ಕಟ್ಟಿಕೊಳ್ಳಲು ಪೂರವಾಗಿವೆ.ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ.ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕೆಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಪ್ರಾಂಶುಪಾಲರಾದ ಶಿವರಾಮ ಚವ್ಹಾಣ, ಶರಣಬಸಪ್ಪ ಪಾಟೀಲ, ರಫಿಯಾ ರುಮಾನಾ ಇದ್ದರು. ಜಿಲ್ಲಾ ಸಮನ್ವಯಾಧಿಕಾರಿ ಶಿವಪುತ್ರಪ್ಪ ಕಕ್ಕಳ ಮೇಲಿ ಅಧ್ಯಕ್ಷತೆ ವಹಿಸಿದ್ದರು. ಲೋಹಿತ ಪೂಜಾರಿ, ವಿಜಯಲಕ್ಷ್ಮಿ ದಾಸರೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಸತಿ ಶಾಲೆಗಳ ಹತ್ತು ತಂಡಗಳು ಭಾಗವಹಿಸಿದ್ದವು.