ಚಿತ್ರದುರ್ಗ.ಜೂ.೩;ಜಿಲ್ಲೆಗೆ ಕೇಂದ್ರ ಕಚೇರಿಯಿಂದ ನಿಯೋಜನೆಯಾಗಿರುವ ರಸಗೊಬ್ಬರ ಸರಬರಾಜಿನಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯವಾಗದಂತೆ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ 2023-24ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಬಗ್ಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಲಭ್ಯತೆ ಮತ್ತು ಕೇಂದ್ರ ಕಚೇರಿಯಿಂದ ನಿಯೋಜಿತ ರಸಗೊಬ್ಬರ ಸರಬರಾಜು ಬಗ್ಗೆ ಬೀಜ ಹಾಗೂ ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳು, ವಿತರಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೇಲು ಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲು ಮತ್ತು ಎಲ್ಲಾ ರಸಗೊಬ್ಬರ ಸರಬರಾಜು ಮಾಡುವ ಕಂಪನಿ ಪ್ರತಿನಿಧಿಗಳಿಗೆ ಕಾಪು ದಾಸ್ತಾನಿನಲ್ಲಿ ಕೆ.ಎಸ್.ಎಸ್.ಸಿ. ಮತ್ತು ಮಾರ್ಕೆಟಿಂಗ್ ಫೆಡರೇಶನ್‍ಗೆ ನಿಯಮದಂತೆ ಶೇ.40ರಷ್ಟು ದಾಸ್ತಾನನ್ನು ಜೂನ್ ಅಂತ್ಯದೊಳಗೆ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.ಕೃಷಿ ಪರಿಕರ ಮಾರಾಟಗಾರರು ನಿಗಧಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಹಾಗೂ ಗೊಬ್ಬರಗಳ ಜೊತೆ ಬೇರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡದೇ ರೈತರಿಗೆ ಅವಶ್ಯಕತೆಯಿರುವ ಕೃಷಿ ಪರಿಕರಗಳನ್ನು ವಿತರಿಸಲು ಸೂಚನೆ ನೀಡಿದರು.