ರಸಗೊಬ್ಬರ ಬೆಲೆ ಇಳಿಕೆಗೆ ರೈತ ಸಂಘ ಆಗ್ರಹ

ಕೋಲಾರ,ಏ.೨೭: ಸಂಸದ ಎಸ್.ಮುನಿಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸರ್ಕಾರ ೨೦೨೨ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಕೃಷಿ ಉತ್ಪನ್ನವನ್ನು ಹೆಚ್ಚಿಸಿದೆ ಗೊಬ್ಬರದ ಬೆಲೆ ಏರಿಕೆಯಿಂದಾಗಿ ಕೃಷಿಕರು ವ್ಯವಸಾಯವನ್ನು ತ್ಯಜಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣ ಆಗುವ ಆತಂಕ ರೈತ ಸಮುದಾಯದಲ್ಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಅವರು ಮನವಿ ಸಲ್ಲಿಸಿದರು.
ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರವೂ ಬೇರೆ ದೇಶಗಳ ಕೃಷಿ ಉಪಕರಣಗಳ ಮತ್ತು ಉಪ ಕಸಬುಗಳಿಗೆ ಸಬ್ಸಿಡಿಯನ್ನು ಹೆಚ್ಚು ನೀಡುತ್ತಲೇ ಬರುತ್ತಿದೆ. ಕೃಷಿಕನಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸುತ್ತಿವೆ. ಆದರೆ ಬಹುಸಂಖ್ಯಾತರು ತೊಡಗಿರುವ ನಮ್ಮ ದೇಶದ ಕೃಷಿ ಕ್ಷೇತ್ರ ಮತ್ತು ಕೃಷಿಕರಿಗೆ ಭಾರತ ಸರ್ಕಾರ ನೀಡುತ್ತಾ ಬಂದಿರುವ ಉತ್ತೇಜನಗಳು ಪ್ರತಿ ವರ್ಷ ಇಳಿಮುಖವಾಗುತ್ತಿದೆ. ಗೊಬ್ಬರದ ಸಬ್ಸಿಡಿಯನ್ನು ಕಡಿಮೆಮಾಡಿದ್ದರಿಂದಲೇ ಉತ್ಪಾದಕ ಕಂಪನಿಗಳು ಹೆಚ್ಚು ಬೆಲೆಯನ್ನು ನಿಗದಿಮಾಡುತ್ತಿವೆ. ಇದು ಕೃಷಿಕನಿಗೆ ಹೊರಲಾರದಷ್ಟು ಹೊರೆಯಾಗಿದೆ ಎಂದು ಪ್ರತಿಕ್ರಿಯಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷರಾದ ಸ್ವಸ್ತಿಕ್ ಶಿವು ಅವರು ಮಾತನಾಡಿ, ಈ ಸಂಬಂಧ ಏರಿಸಿರುವ ಗೊಬ್ಬರದ ಬೆಲೆಯನ್ನು ಇಳಿಸಬೇಕು ಕೃಷಿ ಮತ್ತು ಕೃಷಿಕರಿಗೆ ಮತ್ತಷ್ಟು ಮುಖ್ಯವಾಗಿ ಉತ್ತೇಜನ ಕೊಡುವಂತ ಯೋಜನೆಗಳನ್ನು ರೂಪಿಸಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ತಾವು ಜಾರಿಗೆ ತರಲು ಹೊರಟಿರುವ ೩ ಕೃಷಿ ಸಂಬಂಧಿತ ಮಸೂದೆಗಳನ್ನು ವಾಪಸ್ಸು ಪಡೆಯಬೇಕು. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸುವುದನ್ನು ಕೈ ಬಿಡಬೇಕು. ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಹೆಚ್ಚಳದಿಂದ ರೈತ ಸಮುದಾಯ ಸೇರಿದಂತೆ ಎಲ್ಲರಿಗೂ ಹೊರೆಯಾಗಿದೆ ಅಗತ್ಯ ವಸ್ತುಗಳ ಬೆಲೆಯನ್ನು ಶೀಘ್ರವಾಗಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ನಗರ ಪ್ರಕಾಶ್, ಮಾಲೂರು ತಾಲ್ಲೂಕು ಅಧ್ಯಕ್ಷ ಜೆಸಿಬಿ ದೇವರಾಜ್, ಪಾಲೇಶ್‌ಬಾಬು, ನವೀನ್, ನಾಗರಾಜ್, ನಲ್ಲಂಡಹಳ್ಳಿ ಯಲ್ಲೇಶ್‌ಕುಮಾರ್, ಸತೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.