ರಸಗೊಬ್ಬರ ಪೂರೈಕೆ ಕೃಷಿ ಉತ್ಪನ್ನ ಹೆಚ್ಚಳ – ಡಿವಿಎಸ್

ಬೆಂಗಳೂರು, ನ. ೮- ಕೊರೊನಾ ಸಂದರ್ಭದಲ್ಲಿ ವಿಶ್ವದಲ್ಲಿನ ೧೨೦ ದೇಶಕ್ಕೆ ಔಷಧಿ ಸರಬರಾಜು ಮಾಡಿದ್ದೇವೆ. ಅಮೆರಿಕಾ, ರಷ್ಯಾ ದೇಶಗಳಿಂದ ಬೇಡಿಕೆಯಿತ್ತು. ಅದನ್ನು ಪೂರೈಸಿದ್ದೇವೆ ಎಂದು ರಾಸಾಯನಿಕ ಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಕೆಂಗೇರಿ ಉಪನಗರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿ ದೇಶದಲ್ಲಿ ಕೃಷಿ ಚಟುವಟಿಕೆಗಳು ಶೇ. ೪೦ ರಷ್ಟು ಹೆಚ್ಚಳವಾಗಿದ್ದು, ರಸಗೊಬ್ಬರ ಕೊರತೆಯಾಗದಂತೆ ಅಗತ್ಯಕ್ರಮ ಕೈಗೊಂಡಿರುವುದು ಕಾರಣ ಎಂದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ ಎಲ್ಲರನ್ನೂ ಜೊತೆಗೂಡಿ ಕರೆದುಕೊಂಡು ಹೋಗುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರ ನಾಯಕತ್ವ ಬಲಪಡಿಸುವ ಮೂಲಕ ದೇಶ ಮತ್ತು ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸೋಣ ಎಂದು ಕರೆನೀಡಿದರು.
ಮೂಲ ಮತ್ತು ಹೊಸಬರು ಎಂಬ ಭಾವನೆ ಬಿಟ್ಟು ನಾವೆಲ್ಲರೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಎಂಬ ಭಾವನೆ ಬೆಳೆಸಿಕೊಳ್ಳೋಣ. ಪಕ್ಷ ವಹಿಸುವ ಎಲ್ಲಾ ಜವಾಬ್ದಾರಿಯನ್ನು ಸಾಮಾನ್ಯ ಕಾರ್ಯಕರ್ತರಂತೆ ನಿರ್ವಹಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣ್, ಬೆಂಗಳೂರು ಉತ್ತರ ಜಿಲ್ಲಾ ಎಸ್ ಸಿ, ಮೋರ್ಚಾ ಅಧ್ಯಕ್ಷ ಜಿ. ಮುನಿರಾಜು, ಪಾಲಿಕೆ ಮಾಜಿ ಸದಸ್ಯರಾದ ಜಿ. ಆಂಜಿನಪ್ಪ, ಮೈಲಸಂದ್ರ ಮುನಿರಾಜು ಆರ್ಯ ಶ್ರೀನಿವಾಸ್, ನಗರ ಮಂಡಲದ ಅಧ್ಯಕ್ಷ ವಾಜರಹಳ್ಳಿ ಶಶಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತರಾಜು, ಕಾರ್ಯದರ್ಶಿ ರಘು, ತಾ.ಪಂ. ಅಧ್ಯಕ್ಷ ಬಿ. ಕೃಷ್ಣಪ್ಪ, ಮಂಡಲ ಅಧ್ಯಕ್ಷ ಅನಿಲ್ ಬೆಳಗೇರಿ, ಉಪಾಧ್ಯಕ್ಷೆ ನಾಗವೇಣಿ, ಪ್ರಧಾನ ಕಾರ್ಯದರ್ಶಿ ಸೌಮ್ಯ ಭಾರ್ಗವಿ ಮಾತನಾಡಿದರು.