ರಸಗೊಬ್ಬರ ಖರೀದಿಯಲ್ಲಿ ರೈತರು

ಹೊನ್ನಾಳಿ.ಮೇ.೩: ಇತ್ತೀಚೆಗೆ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ರಸಗೊಬ್ಬರ ಮತ್ತು ಕೀಟ ನಾಶಕ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ತೆರೆಯಲು ಅನುಮತಿ ನೀಡುವಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ತಹಸೀಲ್ದಾರ್ ಮತ್ತು ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆದಿದ್ದವು.ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ರೈತರು ಮತ್ತು ರೈತ ಸಂಘಟನೆಗಳು ಎಂ.ಪಿ.ರೇಣುಕಾಚಾರ್ಯ ಅವರಿಗೆ ಲಾಕ್ ಡೌನ್ ಸಮಯವನ್ನು ಬದಲಾವಣೆ ಮಾಡಿ ಮದ್ಯಾಹ್ನದವರೆಗೆ ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳನ್ನು ತೆರೆಸುವಂತೆ ಮನವಿ ಮಾಡಿದ್ದರು.ಅವಳಿ ತಾಲ್ಲೂಕುಗಳಲ್ಲಿ ಸುಮಾರು 40000 ಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಹೊನ್ನಾಳಿ ತಾಲ್ಲೂಕಿನಲ್ಲಿ 48 ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ 28 ರಸಗೊಬ್ಬರ ಮತ್ತು ಕೀಟ ನಾಶಕ ಅಂಗಡಿಗಳಿವೆ.ಎಂ.ಪಿ.ರೇಣುಕಾಚಾರ್ಯ ಅವರು ಪೊಲೀಸ್ ಅಧಿಕಾರಿಗಳು ಮತ್ತು ಕೋವಿಡ್ ನಿಯಂತ್ರಣಾ ಸಮಿತಿಯಲ್ಲಿರುವ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಕೃಷಿ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬರುವ ರೈತರಿಗೆ ವಿನಾ ಕಾರಣ ತೊಂದರೆ ಕೊಡುವುದು, ಲಾಠಿ ಚಾರ್ಜ್ ಮಾಡಬಾರದೆಂದು ಖಡಕ್ ಸಂದೇಶ ರವಾನಿಸಿದ್ದರ ಹಿನ್ನೆಲೆಯಲ್ಲಿ ಇಂದು ರಸಗೊಬ್ಬರ ಮತ್ತು ಕೀಟ ನಾಶಕ ಅಂಗಡಿಗಳಲ್ಲಿ ರೈತರು ನಿರ್ಭೀತಿಯಿಂದ ತಮ್ಮ ಜಮೀನಿಗೆ ಅವಶ್ಯವಿರುವ ಕೃಷಿ ಪರಿಕರಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಕಂಡು ಬಂತು.ಈಗಾಗಲೇ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ.ಸುರೇಶ್ ಮತ್ತು ಅವರ ತಂಡದವರು ಅವಳಿ ತಾಲ್ಲೂಕುಗಳ ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳಿಗೆ ದೀಢೀರ್ ಭೇಟಿ ನೀಡಿ ಸುಮಾರು 60 ಸ್ಯಾಂಪಲ್‌ಗಳ ಗೊಬ್ಬರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಕಳಪೆ ಬೀಜಗಳು ವಿತರಣೆಯಾಗದಂತೆ ಮತ್ತು ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲು ಹಾಗೂ ಯಾವುದೇ ಕಾರಣಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಶಾಸಕರ ಸೂಚನೆ ಮೇರೆಗೆ ನಿಗಾವಹಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ.ಸುರೇಶ್ ಮಾಹಿತಿ ನೀಡಿದ್ದಾರೆ.ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಕೋರಿ ಪುಟ್ಟಣ್ಣ, ಕಾರ್ಯದರ್ಶಿ ಹಾಲೇಶ್ ಪಟೇಲ್, ಖಜಾಂಚಿ ಬಸವರಾಜ್, ಗೌರವಾಧ್ಯಕ್ಷ ಎಂ.ಬಿ.ಚಂದ್ರಪ್ಪ, ಸಾಯಿ ಹಾಲೇಶ್, ಮಾಲತೇಶ್, ತಿಪ್ಪೇಶ್, ಸತೀಶ್, ಪ್ರಭು ಮತ್ತು ಪದಾಧಿಕಾರಿಗಳು ಕೃಷಿ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತದ ಸೂಚನೆಯ ಮೇರೆಗೆ ಹೊನ್ನಾಳಿ ತಾಲ್ಲೂಕಿನ ಎಲ್ಲಾ ಕೃಷಿ ಪರಿಕರಗಳಿಗೆ ಸಂಬಂಧಿಸಿದ ಅಂಗಡಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಎಲ್ಲರೂ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ವ್ಯಾಪಾರ ಮಾಡುವಂತೆ ಸಲಹೆ ನೀಡಿದ್ದಾರೆ.