ರಸಗೊಬ್ಬರವನ್ನು ಹಳೆ ದರದಲ್ಲಿ ನೀಡಲು ರೈತ ಸಂಘ ಒತ್ತಾಯ

ರಾಯಚೂರು, ಮೇ.೨೦- ಕೇಂದ್ರ ಸರ್ಕಾರ ಏರಿಸಿರುವ ಪೆಟ್ರೋಲ್ , ಡೀಸೆಲ್ ಬೆಲೆಯನ್ನು ಪರಿಷ್ಕರಿಸಬೇಕು ಹಾಗೂ ಮೀನುಗಾರರಿಗೆ ಕೊಟ್ಟಂತೆ ರೈತರಿಗೂ ಪೆಟ್ರೋಲ್,ಡೀಸಲ್ ಸಹಾಯಧನದ ಅಡಿಯಲ್ಲಿ ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಏರಿಸಿರುವ ರಸಗೊಬ್ಬರಗಳ ಬೆಲೆಯನ್ನು ವಾಪಸ್ಸು ಪಡೆದು ಹಿಂದಿನ ವರ್ಷದ ಬೆಲೆಯಲ್ಲಿಯೇ ಕೊಡಬೇಕು.ಫಸಲ್ ಭೀಮಾ ವಿಮಾ ಯೋಜನೆಯನ್ನು ಪರಿಷ್ಕರಿಸಿ ಪ್ರತಿ ರೈತನ ಸರ್ವೆ ನಂಬರವಾರು ಪ್ರತಿ ವರ್ಷ ನಷ್ಟ ಪರಿಹಾರವನ್ನು ಮುಂದಿನ ಬೆಳೆ ಇಡುವ ಅವಧಿಯ ಒಳಗಾಗಿ ವಿತರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೃಷಿ ಯಂತ್ರೋಪಕರಣಗಳ, ತುಂತುರು ನೀರಾವರಿ, ಹನಿ ನೀರಾವರಿ, ಬಿತ್ತನೆ ಬೀಜಗಳ,ಔಷಧಿಗಳ ಸಹಾಯಧನವನ್ನು ಹಿಂದಿನ ವರ್ಷದಂತೇ ಮುಂದುವರಿಸಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಬೆಲೆ ಖಾತ್ರಿ ಮತ್ತು ಮಾರುಕಟ್ಟೆ ಭದ್ರತೆ ಒದಗಿಸುವವರಿಗೆ ಮೇಲಿನ ಎಲ್ಲಾ ಸಹಾಯಧನಗಳನ್ನು ಮುಂದುವರಿಸಬೇಕು. ರಾಜ್ಯ ಸರ್ಕಾರ ರಾಜ್ಯಾದ್ಯಂತ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಜಾರಿಗೆ ತರಬೇಕು.ಹಳೆಯ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.ಡಾ.ಸ್ವಾಮಿನಾಥನ್ ವರದಿಯಂತೆ ಛಿ೨ + ೫೦ ಪಾರ್ಮುಲದಂತೆ ಕೃಷಿ ಉತ್ಪನ್ನಗಳ ಬೆಲೆ ಜಾರಿಗೊಳಿಸಬೇಕು . ಎಲ್ಲಾ ಬ್ಯಾಂಕ್ , ಫೈನಾನ್ಸ್ , ಸಹಕಾರ ಸಂಘಗಳ ಮತ್ತು ಹಣಕಾಸು ಸಂಸ್ಥೆಗಳು ಕೋವಿಡ್ -೧೯ ಸಮಯದಲ್ಲಿ ರೈತರ ಎಲ್ಲಾ ಸಾಲಗಳ ಮೇಲಿನ ಬಡ್ಡಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಹೆಚ್.ರವಿ ಕುಮಾರ್, ಬಡೇಸಾಬ್,ಮಂಜುನಾಥ, ನಿಂಗಪ್ಪ ಜಿ.ವಿ. ಸೇರಿದಂತೆ ಇತರರು ಇದ್ದರು.