ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.22: ಎಲ್ಲಾ ಗೊಬ್ಬರದ ಅಂಗಡಿಯ ಮಾಲೀಕರು ರಸಗೊಬ್ಬರ ಔಷಧಿ ಬೀಜಗಳನ್ನು ಸರ್ಕಾರ ಮತ್ತು ಕಂಪನಿ ನಿರ್ಧಾರ ಮಾಡಿದ ಬೆಲೆಯಲ್ಲಿ ಮಾರಾಟ ಮಾಡಬೇಕು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಆ ಅಂಗಡಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶಿಲ್ದಾರರಾದ ಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ನಡೆದ ಕೃಷಿ ಉತ್ಪನ್ನಗಳ ಮಾರಾಟ ಗಾರರ ಮತ್ತು ರೈತ ಮುಖಂಡರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಗೊಬ್ಬರ ಅಂಗಡಿಗಳಲ್ಲಿ ಸರ್ಕಾರ ಮತ್ತು ಕಂಪನಿ ನಿರ್ಧಾರ ಮಾಡಿದ ಬೆಲೆಗೆ ರಸಗೊಬ್ಬರ ಮತ್ತು ಬೀಜ ಔಷಧಗಳನ್ನು ಮಾರಾಟ ಮಾಡಬೇಕು ಇದಕ್ಕಿಂತ ಹೆಚ್ಚಿನ ಬೆಲೆ ಯಾರು ತೆಗೆದು ಕೊಳ್ಳಬಾರದು.ಈ ಬಗ್ಗೆ ಯಾರಾದರೂ ಅಧಿಕೃತ ರಸೀದಿಯೊಂದಿಗೆ ನನಗೆ ದೂರು ನೀಡಿದ್ದಲ್ಲಿ ಅಂತಹ ಅಂಗಡಿಗಳ ಮಾರಾಟದ ಲೈಸನ್ಸ್ ಅನ್ನು ರದ್ದು ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಕೆಲವು ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದರು. ಈ ಬಗ್ಗೆ ತಮ್ಮಲ್ಲಿ ರಸೀದಿ ಇದ್ದರೆ ಕೊಡಿ ನಾವು ಕ್ರಮ ಕೈಗೊಳ್ಳುವುದಾಗಿ ಎ ಡಿ ಅವರಿಗೆ ಹೇಳುತ್ತೇವೆ ಎಂದು ತಿಳಿಸಿದರು.
ನಂತರ ಸಹಾಯಕ ಕೃಷಿ ನಿರ್ದೇಶಕರಾದ ಸುನಿಲ್ ಕುಮಾರ್ ಮಾತನಾಡಿ ಪ್ರತಿ ಅಂಗಡಿ ಮಾಲೀಕರು ರಸ ಗೊಬ್ಬರಗಳಾದ ಡಿಎಪಿ 1350 ರೂ, ಯೂರಿಯಾ 266 ರೂ, 20:26 1250 ರೂ,
16 :20 1150 ರೂ, 10:26 1470 ರೂ ಗಳ ಬೆಲೆಯಲ್ಲಿ ಮಾರಾಟ ಮಾಡಬೇಕು. ಇದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದರು.
ರೈತ ಸಂಘಟನೆ ಕಾರ್ಯಕರ್ತರು ಮತ್ತು ಇತರರು ತಾಲೂಕಿನಲ್ಲಿ ಬರುವ ವಿ.ಎಸ್ ಎಸ್ ಎನ್ ಗಳನ್ನು ನಮ್ಮಲ್ಲಿ ಪರವಾಗಿ ತೆಗೆದುಕೊಂಡು ಗೊಬ್ಬರವನ್ನು ತರಿಸಿ ಮಾರಾಟ ಮಾಡಲು ಹೇಳಿ ಇದರಿಂದ ರೈತರಿಗೆ ಅನುಕೂಲ ಹೆಚ್ಚಾಗಿ ಇರುತ್ತದೆ ಕೇವಲ ಮಂಗಳ ಕಂಪನಿಯ ಗೊಬ್ಬರವನ್ನು ಮಾತ್ರ ಕೇಳುತ್ತಾರೆ ಆದರೆ ಮಂಗಳ ಕಂಪನಿಯ ಗೊಬ್ಬರ ದಲ್ಲಿರುವ ಪೋಷಕಾಂಶಗಳು ಇತರೆ ಕಂಪನಿ ಯಲ್ಲೂ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತರ ಸಂಘದ ಉಪಾಧ್ಯಕ್ಷರಾದ ಭರ್ಮಣ್ಣ, ಕೊಟ್ರೇಶಪ್ಪ, ಪ್ರಕಾಶ್ ಶ್ರೀಧರ್ ಒಡೆಯರ್, ಕೃಷಿ ಪರಿಕರ ಮಾರಾಟದ ಉಪಾಧ್ಯಕ್ಷರಾದ ಮೂಗಪ್ಪ, ಸೇರಿದಂತೆ ತಾಲೂಕಿನ ಎಲ್ಲಾ ಕೃಷಿ ಪರಿಕರಗಳ ಮಾರಾಟಗಾರರು ಉಪಸ್ಥಿತರಿದ್ದರು.
ಈ ಸಭೆಯ ವಂದನಾರ್ಪಣೆಯನ್ನು ಎ.ಓ.ಶ್ಯಾಮ್ ಸುಂದರ ನೇರವೆರಿಸಿದರು…