ರಸಗುಲ್ಲ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು :
ಕೆನೆಭರಿತ ಹಾಲು ೧ ಲೀಟರ್
ಲಿಂಬೆ ರಸ ೩ ದೊಡ್ಡ ಚಮಚ
ಸಕ್ಕರೆ ಒಂದೂವರೆ ಕಪ್
ಏಲಕ್ಕಿ? ೩

ಮಾಡುವ ವಿಧಾನ:
ಕೆನೆಭರಿತ ಹಾಲನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ ಹಾಗೂ ದೊಡ್ಡ ಉರಿಯಲ್ಲಿ ಕುದಿಸಿ.

೨ ದೊಡ್ಡ ಚಮಚ ಲಿಂಬೆ ರಸವನ್ನು ಹಾಕಿ ಚೆನ್ನಾಗಿ ಕಲಕಿ. ಹಾಲು ಒಡೆಯುತ್ತದೆ.ಪೂರ್ತಿಯಾಗಿ ಒಡೆದು ಕೆನೆ ಮತ್ತು ನೀರಿನಂಶ ಬೇರೆಯಾಗದಿದ್ದರೆ ಮತ್ತೆ ೧ ದೊಡ್ಡ ಚಮಚ ಆಗುವಷ್ಟು ಲಿಂಬೆ ರಸ ಹಾಕಿ ಕಲಕಿ.

ಒಂದು ಶುಭ್ರವಾದ ಬಟ್ಟೆಯ ಮೂಲಕ ಗಾಳಿಸಿಕೊಂಡರೆ ಕೆನೆ ಅಂಶ ಮಾತ್ರ ಉಳಿದುಕೊಳ್ಳುತ್ತದೆ. ಚೆನ್ನಾಗಿ ಹಿಂಡಿ ಬಟ್ಟೆಯನ್ನು ಸುಮಾರು ೩೦ ನಿಮಿಷಗಳ ಕಾಲ ಹಾಗೆಯೇ ತೂಗು ಬಿಡಿ.

೩೦ ನಿಮಿಷಗಳ ನಂತರ ಬಟ್ಟೆಯಲ್ಲಿರುವ ಪನೀರನ್ನು ಒಂದು ತಟ್ಟೆಯ ಮೇಲೆ ಹಾಕಿ ಅಂಗೈಯಿಂದ ಚೆನ್ನಾಗಿ ಕನಿಷ್ಠ ೧೦ ನಿಮಿಷಗಳವರೆಗಾದರೂ ನಾದಬೇಕು.
ನಂತರ ಅದರಿಂದ ಬಿರುಕಿಲ್ಲದ ಮೃದುವಾದ ಮೇಲ್ಮೈಯಿರುವ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.

ಒಂದೂವರೆ ಕಪ್ ಸಕ್ಕರೆಗೆ ಸುಮಾರು ಎರಡರಿಂದ ಎರಡೂವರೆ ಕಪ್ ಆಗುವಷ್ಟು ನೀರು ಹಾಕಿ ಕುದಿಯಲು ಬಿಡಿ. ಸಕ್ಕರೆ ಸರಿಯಾಗಿ ಕರಗಿ ಪಾಕವು ಕುದಿಯಲು ಪ್ರಾರಂಭಿಸಿದ ಮೇಲೆ ಮಾಡಿಟ್ಟ ರಸಗುಲ್ಲದ ಉಂಡೆಗಳನ್ನು ಹಾಕಿ.

೨೦ ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ ಒಲೆಯಿಂದ ಕೆಳಗಿಳಿಸಿ. ಸುಮಾರು ೬ ರಿಂದ ೮ ಗಂಟೆಗಳ ಕಾಲ ಹಾಗೆಯೇ ಸಕ್ಕರೆ ಪಾಕದಲ್ಲಿ ಅದ್ದಿ ಇರಲು ಬಿಟ್ಟರೆ ರೊಶೋಗುಲ್ಲ ತುಂಬಾ ರಸಭರಿತವಾಗಿ ಮೃದುವಾಗಿ ರುಚಿಯಾಗಿ ಇರುತ್ತದೆ. ರುಚಿಯಾದ ರೊಶೋಗುಲ್ಲ ಸವಿಯುವ ಮುಂಚೆ ಬೇಕಿದ್ದಲ್ಲಿ ಫ್ರಿಡ್ಜ್ನಲ್ಲಿಟ್ಟು ತಣ್ಣಗಾಗಿಸಬಹುದು.