ರಷ್ಯಾ ಶೆಲ್ ದಾಳಿಗೆ ೮ ಮಂದಿ ಬಲಿ

ಕೀವ್ (ಉಕ್ರೇನ್), ಮೇ ೧೮- ರಷ್ಯಾ ಹಾಗೂ ಉಕ್ರೇನ್ ನಡುವಿನ ಕಲಹ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಾ ಸಾಗುತ್ತಿದೆ. ಈ ನಡುವೆ ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದ ಕನಿಷ್ಠ ಎಂಟು ಜನರು ಸಾವನ್ನಪ್ಪಿ, ೧೭ ಜನರು ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಉಕ್ರೇನ್‌ನ ನಾಗರಿಕ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದರೆ ಇದೀಗ ಉಕ್ರೇನ್ ಕೂಡ ಇದೇ ಹಾದಿಗೆ ಮರಳಿದೆ. ಸದ್ಯ ಎರಡೂ ಕಡೆಯಿಂದಲೂ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಇದೇ ಅವಧಿಯಲ್ಲಿ ಖೆರ್ಸನ್ ಪ್ರದೇಶದ ಹಳ್ಳಿಯೊಂದರ ಆಟದ ಮೈದಾನದ ಬಳಿ ರಷ್ಯಾ ಶೆಲ್ ದಾಳಿ ನಡೆಸಿದ ಪರಿಣಾಮ ಐದು ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಒಲೆಕ್ಸಾಂಡರ್ ಪ್ರೊಕುಡಿನ್ ಹೇಳಿದ್ದಾರೆ. ಅಲ್ಲದೆ ಆಕ್ರಮಿತ ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಉಕ್ರೇನಿಯನ್ ಪಡೆ ನಡೆಸಿದ ಶೆಲ್ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ೧೫ ಮಂದಿ ಗಾಯಗೊಂಡಿದ್ದಾರೆ ಎಂದು ನಗರದ ರಷ್ಯಾದ ಬೆಂಬಲಿತ ಮೇಯರ್ ಅಲೆಕ್ಸಿ ಕುಲೆಮ್ಜಿನ್ ಹೇಳಿದ್ದಾರೆ. ಈ ಮೂಲಕ ಒಂದು ಸಮಯದಲ್ಲಿ ತನ್ನದೇ ಆಡಳಿತದಲ್ಲಿದ್ದ ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಉಕ್ರೇನ್ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಉಕ್ರೇನಿಯನ್ ಪಡೆಗಳು ಬುಧವಾರ ಡೊನೆಟ್ಸ್ಕ್ ನಗರದ ಮೇಲೆ ೧೬೩ ಶೆಲ್‌ಗಳು ಮತ್ತು ೨೦ ರಾಕೆಟ್‌ಗಳನ್ನು ಹಾರಿಸಿದ್ದು, ಗಾಯಗೊಂಡವರಲ್ಲಿ ೧೩ ವರ್ಷದ ಮಗು ಕೂಡ ಸೇರಿದೆ. ಶೆಲ್ ದಾಳಿಗಳು ವಸತಿ-ಮನೆಗಳು ಮತ್ತು ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಧ್ವಂಸಗೊಳಿಸಿದ್ದು, ಮೂಲಸೌಕರ್ಯವನ್ನು ಹಾನಿಗೊಳಿಸಿದೆ ಎಂದು ಮೇಯರ್ ಅಲೆಕ್ಸಿ ಕುಲೆಮ್ಜಿನ್ ಆರೋಪಿಸಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿರುವ ಡೊನೆಟ್ಸ್ಕ್ ನಗರವು ೨೦೧೪ ರಿಂದ ರಷ್ಯಾದ ಪರ ಪ್ರತ್ಯೇಕತಾವಾದಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಅದರಲ್ಲೂ ವಿಶಾಲವಾದ ಡೊನೆಟ್ಸ್ಕ್ ಪ್ರದೇಶವು ಕಳೆದ ವರ್ಷ ರಷ್ಯಾದಿಂದ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ನಾಲ್ಕು ಪ್ರದೇಶಗಳಲ್ಲಿ ಒಂದಾಗಿದೆ.