ರಷ್ಯಾ ವಿದೇಶಾಂಗ ಸಚಿವರಿಗೆ ವೀಸಾ ಮಂಜೂರು

ಮಾಸ್ಕೋ, ಸೆ.೧೪- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ರಶ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹಾಗೂ ಅಲ್ಲಿನ ನಿಯೋಗದ ಸದಸ್ಯರಿಗೆ ವೀಸಾ ನೀಡಲಾಗಿದೆ ರಶ್ಯದ ಸುದ್ಧಿಸಂಸ್ಥೆಯು ಅಲ್ಲಿನ ವಿದೇಶಾಂಗ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮಂಗಳವಾರ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ೭೭ನೇ ಅಧಿವೇಶನ ಆರಂಭಗೊಂಡಿದೆ. ಅದರೆ ಇದರಲ್ಲಿ ಪಾಲ್ಗೊಳ್ಳಲು ರಷ್ಯಾ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸುತ್ತಿದೆ ಎಂದು ರಷ್ಯಾ ಹಲವು ಬಾರಿ ಟೀಕಿಸಿತ್ತು. ಆದರೆ ಕೊನೆಗೂ ರಷ್ಯಾ ನಿಯೋಗಕ್ಕೆ ವಿಸಾ ನೀಡಲಾಗಿದೆ. ವೀಸಾ ನೀಡಲು ವಿಳಂಬಿಸುವ ಮೂಲಕ ಅಮೆರಿಕವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾದ ಪೂರ್ಣ ಪ್ರಮಾಣದ ನಿಯೋಗದ ಭಾಗವಹಿಸುವಿಕೆಯನ್ನು ತಡೆಯುತ್ತಿದೆ ಎಂದು ರಷ್ಯಾ ಆರೋಪಿಸಿತ್ತು. ರಶ್ಯದ ಪೂರ್ಣಪ್ರಮಾಣದ ನಿಯೋಗಕ್ಕೆ ವೀಸಾ ನಿರಾಕರಿಸುವ ಮೂಲಕ ಅಮೆರಿಕ ತನ್ನ ಬಾಧ್ಯತೆಗಳನ್ನು ಉಲ್ಲಂಘಿಸುತ್ತಿದೆ. ಈ ಪರಿಸ್ಥಿತಿಗಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಯನ್ನು ಹೊಣೆಯಾಗಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಮಂಗಳವಾರ ಹೇಳಿಕೆ ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಉನ್ನತ ಮಟ್ಟದ ಅಧಿವೇಶನಕ್ಕೆ ಮುಂದಿನ ವಾರ ಚಾಲನೆ ದೊರಕಲಿದೆ. ಮಂಗಳವಾರ ವಿದೇಶಾಂಗ ಸಚಿವ ಲಾವ್ರೋವ್ ಹಾಗೂ ಅವರೊಂದಿಗೆ ತೆರಳುವ ಸದಸ್ಯರಿಗೆ ವೀಸಾ ಒದಗಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಇಂಟರ್‌ಫಾಕ್ಸ್ ವರದಿ ಮಾಡಿದೆ.