ರಷ್ಯಾ ಯುದ್ದ ವಿಮಾನಕ್ಕೆ ಡಿಕ್ಕಿ: ಅಮೆರಿಕಾ ಡ್ರೋಣ್ ಧ್ವಂಸ

ವಾಷಿಂಗ್ಟನ್, ಮಾ.೧೫- ಈಗಾಗಲೇ ಒಂದೆಡೆ ರಷ್ಯಾ-ಉಕ್ರೇನ್ ನಡುವಿನ ಯುದ್ದ ನಡೆಯುತ್ತಿದ್ದರೆ ಮತ್ತೊಂದು ಇದೀಗ ರಷ್ಯಾದ ಯುದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಮೆರಿಕಾದ ಕಣ್ಗಾವಲು ಡ್ರೋನ್ ಕಪ್ಪು ಸಮುದ್ರಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ. ಸಹಜವಾಗಿಯೇ ಇದರಿಂದ ಎರಡೂ ದೇಶಗಳ ನಡುವಿನ ಮನಸ್ತಾಪ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನಲ್ಲಿರುವ ರಷ್ಯಾ ರಾಯಭಾರಿ ಅನಾಟೊಲಿ ಆಂಟೊನೊವ್‌ಗೆ ಅಮೆರಿಕಾ ಸಮನ್ಸ್ ನೀಡಿದೆ.
ಎಮ್‌ಕ್ಯು-೯ ರೀಪರ್ ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ತನ್ನ ವಾಡಿಕೆಯ ಕಾರ್ಯಾಚರಣೆಯಲ್ಲಿದ್ದಾಗ ಎರಡು ರಷ್ಯಾದ ಜೆಟ್‌ಗಳು ಅದನ್ನು ತಡೆಯಲು ಪ್ರಯತ್ನಿಸಿದವು ಎಂದು ಯುಎಸ್ ಹೇಳಿದೆ. ಆದರೆ ಅಮೆರಿಕಾದ ಈ ಆರೋಪವನ್ನು ರಷ್ಯಾ ಸಾರಾಸಗಟಾಗಿ ತಳ್ಳಿ ಹಾಕಿದೆ. ಅಮೆರಿಕಾದ ಡ್ರೋನ್ ತನ್ನ ತೀಕ್ಷ್ಣವಾದ ಹಾರಾಟದಿಂದಾಗಿಯೇ ಪತನಗೊಂಡಿದ್ದು, ನಮ್ಮ ಎರಡು ಯುದ್ದ ವಿಮಾನಗಳ ಜೊತೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರಲಿಲ್ಲ. ಅಲ್ಲದೆ ವಿಮಾನವನ್ನು ಟ್ರ್ಯಾಕ್ ಮಾಡಲು ಬಳಸುವ ಟ್ರಾನ್ಸ್‌ಪಾಂಡರ್‌ಗಳನ್ನು ಅಮೆರಿಕಾದ ಡ್ರೋನ್ ಆಫ್ ಮಾಡಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ನಮ್ಮ ಎಮ್‌ಕ್ಯು-೯ ರೀಪರ್ ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ದಿನನಿತ್ಯದ ಕಾರ್ಯಾಚರಣೆ ನಡೆಸುತ್ತಿದ್ದಾಗ ಅದನ್ನು ರಷ್ಯಾದ ವಿಮಾನವು ತಡೆಹಿಡಿದು ಹೊಡೆದುರುಳಿಸಿದೆ. ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಡ್ರೋನ್ ಸಂಪೂರ್ಣ ಹಾನಿಗೊಳಗಾಗಿದೆ. ಘರ್ಷಣೆಗೂ ಮೊದಲು ರಷ್ಯಾದ ಎಸ್‌ಯು-೨೭ ಯುದ್ದ ವಿಮಾನಗಳು ಡ್ರೋನ್ ಮೇಲೆ ಅಜಾಗರೂಕ ಪರಿಸರಕ್ಕೆ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ಇಂಧನ ಸುರಿದಿದ್ದವು ಎಂದು ಅಮೆರಿಕಾ ಆಪಾದನೆ ಮಾಡಿದೆ.