ರಷ್ಯಾ ದಾಳಿ ಹಿಂದೆ ಉಕ್ರೇನ್ ಪಾಶ್ಚಿಮಾತ್ಯರ ಕೈವಾಡ

ಮಾಸ್ಕೋ, ಮಾ.೨೭- ಮಾಸ್ಕೋದ ಸಂಗೀತ ಕಾರ್ಯಕ್ರಮದಲ್ಲಿ ಐಸಿಸ್ ನಡೆಸಿದ ಜಿಹಾದಿ ಕೃತ್ಯದ ಹಿಂದೆ ಉಕ್ರೇನ್ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲವಾಗಿ ನಿಂತಿತ್ತು. ಪಾಶ್ಚಿಮಾತ್ಯ ಮತ್ತು ಉಕ್ರೇನಿಯನ್ ಗುಪ್ತಚರವು ಜಿಹಾದಿಗಳಿಗೆ ನೆರವು ನೀಡಿದ್ದಾರೆ ಎಂದು ರಷ್ಯಾದ ಉನ್ನತ ಅಧಿಕಾರಿಗಳು ನೇರವಾಗಿ ಆರೋಪಿಸಿದ್ದಾರೆ. ಅತ್ತ ರಷ್ಯಾ ಆರೋಪಗಳನ್ನು ಉಕ್ರೇನ್ ತಿರಸ್ಕರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಭದ್ರತಾ ಸೇವೆ ಎಫ್‌ಎಸ್‌ಬಿ ಅಲೆಕ್ಸಾಂಡರ್ ಬೊರ್ಟ್ನಿಕೋವ್, ಈ ಕ್ರಿಯೆಯನ್ನು ಇಸ್ಲಾಮಿಸ್ಟ್ ಜಿಹಾದಿಗಳು ಸ್ವತಹ ಸಿದ್ಧಪಡಿಸಿದ್ದಾರೆ. ಅಲ್ಲದೆ ನಿಸ್ಸಂಶಯವಾಗಿ ಇದನ್ನು ಪಾಶ್ಚಾತ್ಯ ವಿಶೇಷ ಸೇವೆಗಳಿಂದ ಸುಗಮಗೊಳಿಸಲಾಗಿದೆ ಎಂದು ನಾವು ನಂಬುತ್ತೇವೆ. ಉಕ್ರೇನ್‌ನ ವಿಶೇಷ ಸೇವೆಗಳು ಇದಕ್ಕೆ ನೇರ ಸಂಪರ್ಕವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಇನ್ನು ಹತ್ಯಾಕಾಂಡ ನಡೆಸಿದ ಆರೋಪದ ಮೇಲೆ ತಜಕಿಸ್ತಾನದ ನಾಲ್ವರು ನಾಗರಿಕರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇನ್ನೂ ನಾಲ್ವರು ಶಂಕಿತರ ಮೇಲೆ ಭಯೋತ್ಪಾದನೆಗೆ ನೆರವು ನೀಡಿದ ಆರೋಪವಿದೆ. ಶುಕ್ರವಾರ ಸಂಜೆ ಕ್ರೋಕಸ್ ಸಿಟಿ ಹಾಲ್ ಕನ್ಸರ್ಟ್ ಕಾಂಪ್ಲೆಕ್ಸ್‌ಗೆ ನಾಲ್ಕು ಶಸ್ತ್ರಸಜ್ಜಿತ ವ್ಯಕ್ತಿಗಳು ಏಕಾಏಕಿ ನುಗ್ಗಿದ್ದರಿಂದ ೧೩೯ ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ಹೇಳಿದೆ. ಇಬ್ಬರು ಮಕ್ಕಳು ಸೇರಿದಂತೆ ಇನ್ನೂ ೨೨ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.