ರಷ್ಯಾ ದಾಳಿಗೆ ಉಕ್ರೇನ್ ಅಣೆಕಟ್ಟು ಛಿದ್ರ:ಪ್ರವಾಹ ಭೀತಿ

ಕೀವ್ (ಉಕ್ರೇನ್), ಜೂ.೭- ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ದಿನದಿಂದ ದಿನಕ್ಕೆ ಭೀಕರತೆಯತ್ತ ಸಾಗುತ್ತಿರುವ ನಡುವೆ ಇದೀಗ ರಷ್ಯಾ ವಶದಲ್ಲಿರುವ ಉಕ್ರೇನ್‌ನ ನೋವಾ ಕಖೊವ್ಕಾದಲ್ಲಿನ ಬೃಹತ್ ಅಣೆಕಟ್ಟು ದಾಳಿಗೆ ಸಿಲುಕಿ ಛಿದ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅಣೆಕಟ್ಟಿನ ಆಸುಪಾಸಿನಲ್ಲಿರುವ ಸಾವಿರಕ್ಕೂ ಅಧಿಕ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅಣೆಕಟ್ಟು ಹಾಗೂ ಜಲವಿದ್ಯುತ್ ಸ್ಥಾವರವನ್ನು ರಷ್ಯನ್ ಪಡೆಗಳು ಸ್ಪೋಟಿಸಿವೆಯೆಂದು ಉಕ್ರೇನ್ ಆರೋಪಿಸಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್, ಒಡೆದ ಅಣೆಕಟ್ಟಿನಿಂದ ನೀರು ಭಾರೀ ಪ್ರಮಾಣದಲ್ಲಿ ಹರಿದುಹೋಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದೊಂದು ಭೀಕರವಾದ ಪ್ರಾಕೃತಿಕ ವಿಕೋಪವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಘಟನೆ ಹಿನ್ನೆಲೆಯಲ್ಲಿ ಸುಮಾರು ೮೦ಕ್ಕೂ ಹೆಚ್ಚಿನ ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸದ್ಯ ನೆರೆಯ ವಾತಾವರಣ ಕಂಡುಬರಲಿದೆ ಎನ್ನಲಾಗಿದೆ. ಇದೊಂದು ಉಕ್ರೇನ್‌ನ ದಾಳಿಯಿಂದ ನಡೆದ ಅವಘಡ ಎಂದು ಅತ್ತ ರಷ್ಯಾ ಪ್ರತ್ಯಾರೋಪ ಮಾಡಿದೆ. ಇನ್ನು ಈ ಅಣೆಕಟ್ಟು ಕೃಷಿ ಪ್ರದೇಶಗಳಿಗೆ ನೀರಾವರಿ ಸೇರಿದಂತೆ ವಿದ್ಯುತ್ ಉತ್ಪನ್ನ ವಿಚಾರದಲ್ಲಿ ಪ್ರಮುಖವಾಗಿದ್ದು, ಸದ್ಯ ಧ್ವಂಸಗೊಂಡ ಹಿನ್ನೆಲೆಯಲ್ಲಿ ನಾಗರಿಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಈ ಅಣಕೆಟ್ಟು ರಷ್ಯಾ ವಶದಲ್ಲಿರುವ ಕ್ರೈಮಿಯಾಕ್ಕೆ ನೀರನ್ನು ದಕ್ಷಿಣಕ್ಕೆ ಸಾಗಿಸುವ ಪ್ರಮುಖ ನಾಲೆಯಾಗಿದೆ. ಬುಧವಾರ (ಇಂದು) ಬೆಳಗ್ಗೆ ಸದ್ಯ ಘಟನಾ ಸ್ಥಳದಲ್ಲಿ ಶೇಖರಗೊಂಡಿರುವ ನೀರು ಭಾರೀ ಪ್ರಮಾಣದಲ್ಲಿ ಖಾಲಿಯಾಗುತ್ತಿದ್ದು, ಸನಿಹದ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿ ಹರಿಯುತ್ತಿದೆ. ನೀರು ವೇಗವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಡ್ನಿಪ್ರೊ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಖೆರ್ಸನ್ ನಗರಕ್ಕೆ ದುರಂತದ ಪ್ರವಾಹದ ಅಪಾಯವನ್ನುಂಟು ಮಾಡಿದೆ. ಉಕ್ರೇನ್ ಮೂಲಗಳ ಪ್ರಕಾರ ಸದ್ಯ ಒಂದು ಸಾವಿರ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನೂ ೪೦ ಸಾವಿರ ನಾಗರಿಕರ ಸ್ಥಳಾಂತರ ಅಗತ್ಯವಿದೆ ಎನ್ನಲಾಗಿದೆ. ಇನ್ನು ಝಪೊರಿಜ್ಝಿಯಾದ ಅಣುಸ್ಥಾವದ ಪರಿಸ್ಥಿತಿಯ ಬಗ್ಗೆ ತಾನು ನಿಕಟವಾದ ನಿಗಾವಿರಿಸಿರುವುದಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಟ್ವೀಟ್ ಮಾಡಿದೆ. ಅಣೆಕಟ್ಟಿನ ಸ್ಪೋಟವು ಯುರೋಪ್ನ ಅತಿ ದೊಡ್ಡ ಅಣುಶಕ್ತಿ ಸ್ಥಾವರವೆನಿಸಿರುವ ಝಪೊರಿಝ್ಝಿಯಾದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆಯೆಂದು ಉಕ್ರೇನ್ನ ಅಣುಶಕ್ತಿ ನಿರ್ವಹಣಾ ಸಂಸ್ಥೆ ಎನರ್ಗೊವಾಟಮ್ ತಿಳಿಸಿದೆ.