
ವಾಷಿಂಗ್ಟನ್, ಮಾ.೨೯- ಹೊಸ ಸ್ಟಾರ್ಟ್ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವನ್ನು ಅಂತ್ಯಗೊಳಿಸಿದ ರಷ್ಯಾ ಜೊತೆ ಇನ್ನು ಮುಂದೆ ಕೆಲವು ರೀತಿಯ ಪರಮಾಣು ದಾಖಲೆಗಳನ್ನು ವಿನಿಮಯ ಮಾಡುವುದನ್ನು ನಿಲ್ಲಿಸಲಿದ್ದೇವೆ ಎಂದು ಅಮೆರಿಕಾದ ಶ್ವೇತಭವನ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ, ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ, ತನ್ನ ಕಟ್ಟುಪಾಡುಗಳ ಅನುಸರಣೆಗೆ ಮರಳಲು ರಷ್ಯಾವನ್ನು ಪ್ರೇರೇಪಿಸುವ ಸಲುವಾಗಿ ಪ್ರಮಾಣಾನುಗುಣವಾದ ಮತ್ತು ಹಿಂತಿರುಗಿಸಬಹುದಾದ ಪ್ರತಿಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನ್ಯೂ ಸ್ಟಾರ್ಟ್ ಒಪ್ಪಂದದ ರಷ್ಯಾದ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಅಮೆರಿಕಾ ಹೊಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನದ ಸಂಯೋಜಕರಾಗಿರುವ ಜಾನ್ ಕಿರ್ಬಿ, ಈ ಹಿಂದಿನ ನ್ಯೂ ಸ್ಟಾರ್ಟ್ ದ್ವೈವಾರ್ಷಿಕ ಒಪ್ಪಂದಕ್ಕೆ ರಷ್ಯಾ ಸಂಪೂರ್ಣವಾಗಿ ಬದ್ಧತೆ ಪ್ರದರ್ಶಿಸಿಲ್ಲ. ಹಾಗಾಗಿ ಅದರ ಜೊತೆ ನಮ್ಮ ದಾಖಲೆ ಹಂಚಿಕೊಳ್ಳಲು ನಿರಾಕರಿಸಿದ್ದೇವೆ. ಒಪ್ಪಂದ ಮುಂದುವರೆಸದಿರುವ ರಷ್ಯಾ ನಿರ್ಧರಿಸಿರುವ ಕಾರಣ ನಾವು ನಮ್ಮ ದಾಖಲೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ದಾಖಲೆ ಹಂಚಿಕೊಳ್ಳಲು ನಾವು ಬಯಸುತ್ತೇವೆ. ಆದರೆ ಅದೇ ರೀತಿ ರಷ್ಯಾ ಕೂಡ ಇದಕ್ಕೆ ಬದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ ೨೧ರಂದು ಅಮೆರಿಕಾ ಜೊತೆಗಿನ ಹಿಂದಿನ ನ್ಯೂ ಸ್ಟಾರ್ಟ್ ಪರಮಾಣು ಒಪ್ಪಂದದಿಂದ ರಷ್ಯಾ ಹಿಂದೆ ಸರಿದಿತ್ತು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಪ್ಪಂದದಿಂದ ಔಪಚಾರಿಕವಾಗಿ ಹಿಂತೆಗೆದುಕೊಳ್ಳದಿದ್ದರೂ, ಇದು ಎರಡು ಕಡೆಯ ಕಾರ್ಯತಂತ್ರದ ಪರಮಾಣು ಶಸ್ತ್ರಾಗಾರಗಳನ್ನು ಸೀಮಿತಗೊಳಿಸಲಿದೆ.
ಏನಿದು ನ್ಯೂ ಸ್ಟಾರ್ಟ್ ಒಪ್ಪಂದ
ಜಗತ್ತಿನ ಬರೊಬ್ಬರಿ ೯೦ ಪ್ರತಿಶತ ಪರಮಾಣು ಶಸ್ತ್ರಾಸ್ತ್ರಗಳು ಅಮೆರಿಕಾ ಹಾಗೂ ರಷ್ಯಾ ಬಳಿ ಇದೆ. ಈ ಹಿನ್ನೆಲೆಯಲ್ಲಿ ೨೦೧೦ರಲ್ಲಿ ನ್ಯೂ ಸ್ಟಾರ್ಟ್ ಒಪ್ಪಂದಕ್ಕೆ ಅಮೆರಿಕಾ-ರಷ್ಯಾ ಸಹಿ ಹಾಕಿದ್ದು, ೨೦೨೬ರ ವರೆಗೆ ಮುಕ್ತಾಯ ಅವಧಿ ಹೊಂದಿದೆ. ಒಪ್ಪಂದದ ಪ್ರಕಾರ ಎರಡೂ ದೇಶಗಳು ನಿಯೋಜಿಸಬಹುದಾದ ಕಾರ್ಯತಂತ್ರದ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಮಿತಿಗೊಳಿಸುತ್ತದೆ. ಅದರ ನಿಯಮಗಳ ಅಡಿಯಲ್ಲಿ, ರಷ್ಯಾ ಮತ್ತು ಅಮೆರಿಕಾ ೧,೫೫೦ ಕ್ಕಿಂತ ಹೆಚ್ಚು ಕಾರ್ಯತಂತ್ರದ ಪರಮಾಣು ಸಿಡಿತಲೆಗಳನ್ನು ಮತ್ತು ೭೦೦ ಭೂ- ಮತ್ತು ಜಲಾಂತರ್ಗಾಮಿ-ಆಧಾರಿತ ಕ್ಷಿಪಣಿಗಳು ಮತ್ತು ಬಾಂಬರ್‌ಗಳನ್ನು ಅವುಗಳನ್ನು ತಲುಪಿಸಲು ನಿಯೋಜಿಸುವಂತಿಲ್ಲ. ಆದರೆ ಫೆಬ್ರವರಿ ೨೧ರಂದು ಈ ಒಪ್ಪಂದದಿಂದ ರಷ್ಯಾ ಹಿಂದಕ್ಕೆ ಸರಿದಿದೆ.