ರಷ್ಯಾ ಕ್ಷಿಪಣಿ ದಾಳಿ ೬ ಮಂದಿ ಸಾವು

ಕೀವ್ (ಉಕ್ರೇನ್), ಆ.೧- ಮಾಸ್ಕೋ ಮೇಲೆ ಉಕ್ರೇನ್ ಮತ್ತೆ ಡ್ರೋನ್ ದಾಳಿ ನಡೆಸಿದ ಬಳಿಕ ಇದೀಗ ಎರಡೂ ದೇಶಗಳ ನಡುವಿನ ಕದನ ಮತ್ತೆ ತೀವ್ರ ರೂಪ ಪಡೆದುಕೊಂಡಿದೆ. ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹುಟ್ಟೂರಿನ ವಸತಿ ಕಟ್ಟಡದ ಮೇಲೆ ನಡೆದ ಭಾರೀ ಪ್ರಮಾಣದ ಕ್ಷಿಪಣಿ ದಾಳಿಯ ಪರಿಣಾಮ ಆರು ಮಂದಿ ಮೃತಪಟ್ಟು, ೭೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಮಾಸ್ಕೋ ಸೇರಿದಂತೆ ತನ್ನ ಭೂಪ್ರದೇಶದ ಮೇಲಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ಮಿಲಿಟರಿ ಸೌಲಭ್ಯಗಳ ವಿರುದ್ಧ ದಾಳಿಯನ್ನು ಹೆಚ್ಚಿಸಲಾಗಿದೆ ಎಂದು ರಷ್ಯಾ ಹೇಳಿದೆ. ಎರಡು ಕ್ಷಿಪಣಿಗಳು ಬೆಳಿಗ್ಗೆ ೯ ಗಂಟೆಯ ನಂತರ ಮಧ್ಯ ಉಕ್ರೇನಿಯನ್ ನಗರವಾದ ಕ್ರಿವಿ ರಿಗ್‌ನ ಮಧ್ಯಭಾಗಕ್ಕೆ ಹತ್ತಿರ ಬಂದವು ಎಂದು ಉಕ್ರೇನಿಯನ್ ಆಂತರಿಕ ಸಚಿವ ಇಗೊರ್ ಕ್ಲೈಮೆಂಕೊ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ. ಮೃತಪಟ್ಟವರಲ್ಲಿ ೧೦ ವರ್ಷದ ಬಾಲಕಿ ಮತ್ತು ಆಕೆಯ ೪೫ ವರ್ಷದ ತಾಯಿ ಕೂಡ ಸೇರಿದ್ದು, ೭೫ ಜನರು ಗಾಯಗೊಂಡಿದ್ದಾರೆ ಎಂದು ಕ್ಲೈಮೆಂಕೊ ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಒಂಬತ್ತು ಅಂತಸ್ತಿನ ವಸತಿ ಅಪಾರ್ಟ್‌ಮೆಂಟ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಇದರ ಪರಿಣಾಮ ಮುಂಭಾಗದಲ್ಲಿ ದೊಡ್ಡ ರಂಧ್ರವನ್ನು ಹೊಡೆದು ಅದು ಹಲವಾರು ಮಹಡಿಗಳಲ್ಲಿನ ಫ್ಲ್ಯಾಟ್‌ಗಳನ್ನು ನಾಶಪಡಿಸಿದೆ. ಇನ್ನು ಅಗ್ನಿಶಾಮಕ ದಳದದ ಸಿಬ್ಬಂದಿ ಚೆರ್ರಿ-ಪಿಕರ್ ಕ್ರೇನ್ ಮೂಲಕ ಬೆಂಕಿಯ ಮೇಲೆ ನೀರಿನ ಜೆಟ್‌ಗಳನ್ನು ಚಿಮ್ಮಿಸಿದರು. ಆದರೆ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭ ಕಟ್ಟಡದ ಒಂದು ಭಾಗವು ಕುಸಿದಿದೆ ಎಂದು ತುರ್ತು ಸಚಿವಾಲಯ ತಿಳಿಸಿದೆ.