ರಷ್ಯಾ ಕ್ಷಿಪಣಿ ದಾಳಿ: ಜನರಿಗೆ ತಟ್ಟಿದ ವಿದ್ಯುತ್ ಕೊರತೆ

ಕೀವ್ (ಉಕ್ರೇನ್), ನ.೧೮- ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ಮತ್ತಷ್ಟು ತೀವ್ರಗೊಳಿಸಿದ್ದು, ಅಪಾರ ಪ್ರಮಾಣದಲ್ಲಿ ಜನರ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಈ ನಡುವೆ ರಶ್ಯಾದ ಕ್ಷಿಪಣಿಯಿಂದ ದೇಶದಲ್ಲಿನ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿಯ ಪರಿಣಾಮ ಸುಮಾರು ೧ ಕೋಟಿ ಜನರು ವಿದ್ಯುತ್ ಅಭಾವದಿಂದ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಗುರುವಾರ ಉಕ್ರೇನ್ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿರುವ ರಶ್ಯಾ, ಅಲ್ಲಿನ ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಕಟ್ಟಡಗಳನ್ನು ಗುರಿಯಾಗಿರಿಸಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಿಂದ ಸುಮಾರು ೭ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅದೂ ಅಲ್ಲದೆ ವಿದ್ಯುತ್ ಸ್ಥಾವರಗಳಿಗೂ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇನ್ನು ದಾಳಿಯ ಬಗ್ಗೆ ನಿನ್ನೆ ತಡರಾತ್ರಿ ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿ, ಪೂರೈಕೆ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿನಾವು ಹರಸಾಹಸ ಪಡುತ್ತಿದ್ದೇವೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ರಷ್ಯಾದ ಆರು ಕ್ರೂಸ್ ಕ್ಷಿಪಣಿ ಹಾಗೂ ಐದು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ದಕ್ಷಿಣ ನಗರವಾದ ಝಪೊರಿಝಿಯಾ ಸಮೀಪವಿರುವ ವಿಲ್ನ್ಯಾನ್ಸ್ಕ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್ ಬ್ಲಾಕ್‌ಗೆ ರಶ್ಯಾ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಪೂರ್ವದಲ್ಲಿನ ಅನಿಲ ಉತ್ಪಾದನಾ ಘಟಕ ಮತ್ತು ಡ್ನಿಪ್ರೊದಲ್ಲಿನ ಕ್ಷಿಪಣಿ ಕಾರ್ಖಾನೆ ಮೇಲೆ ರಷ್ಯಾ ತನ್ನ ದಾಳಿ ನಡೆಸಿದೆ. ಮುಖ್ಯವಾಗಿ ರಾಜಧಾನಿ ಕೈವ್, ಪಶ್ಚಿಮ ನಗರ ವಿನ್ನಿಟ್ಸಿಯಾ, ನೈಋತ್ಯದಲ್ಲಿ ಒಡೆಸಾ ಬಂದರು ನಗರ ಮತ್ತು ಈಶಾನ್ಯದಲ್ಲಿ ಸುಮಿ ವಿದ್ಯುತ್ ಕಡಿತದಿಂದ ಸುಮಾರು ಒಂದು ಕೋಟಿ ಜನರು ಬಳಲುತ್ತಿದ್ದಾರೆ ಎನ್ನಲಾಗಿದೆ.