
ಸೈಂಟ್ ಪೀಟರ್ಸ್‌ಬರ್ಗ್ (ರಷ್ಯಾ), ಎ.೪- ಇಲ್ಲಿನ ಕೆಫೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ರಷ್ಯಾದ ಪ್ರಮುಖ ಮಿಲಿಟರಿ ಬ್ಲಾಗರ್ ವ್ಲಾಡ್ಲೆನ್ ಟಾಟರ್ಸ್ಕಿ ಅವರ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.
ದಾರ್ಯ ತ್ರೆಪೊವಾ (೨೬) ಬಂಧಿತ ಮಹಿಳೆ. ಕೆಫೆಯಲ್ಲಿ ನಡೆದ ರಷ್ಯಾ ಪರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಟಾಟರ್ಸ್ಕಿ ಅವರಿಗೆ ತ್ರೆಪೊವಾ ಪ್ರತಿಮೆಯ ಉಡುಗೊರೆ ನೀಡಿದ್ದರು. ಬಳಿಕ ಇದು ಸ್ಫೋಟಗೊಂಡು, ಟಾಟರ್ಸ್ಕಿ ಮೃತಪಟ್ಟು, ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ರಷ್ಯಾದ ಪೊಲೀಸ್ ಅಧಿಕಾರಿಗಳು ಉಡುಗೊರೆ ನೀಡಿದ ತ್ರೆಪೊವಾ ಎಂಬ ಮಹಿಳೆಯನ್ನು ಬಂಧಿಸಿ, ವಿಚಾರಣೆ ತೀವ್ರಗೊಳಿಸಿದ್ದಾರೆ. ಇನ್ನು ಪೊಲೀಸರು ತ್ರೆಪೊವಾ ಜೊತೆ ನಡೆಸಿದ ವಿಚಾರಣೆಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ಇದರಲ್ಲಿ ಮಹಿಳೆ ಟಾಟರ್ಸ್ಕಿ ಅವರಿಗೆ ಉಡುಗೊರೆ ನೀಡಿದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಈ ದಾಳಿಯನ್ನು ಉಕ್ರೇನ್‌ನಲ್ಲಿ ಯೋಜಿಸಲಾಗಿದ್ದು, ಈ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ. ಆದರೆ ಅತ್ತ ರಷ್ಯಾದ ಆಂತರಿಕ ಕಲಹದಿಂದಾಗಿಯೇ ಟಾಟರ್ಸ್ಕಿ ಅವರನ್ನು ಹತ್ಯೆ ನಡೆಸಲಾಗಿದೆ ಎಂದು ಉಕ್ರೇನ್ ಆಪಾದಿಸಿದೆ. ಒಟ್ಟಿನಲ್ಲಿ ಆರೋಪ-ಪ್ರತ್ಯಾರೋಪ ಮುಂದುವರೆದಿರುವ ಜೊತೆಗೆ ಮಹಿಳೆಯ ವಿಚಾರಣೆ ಕೂಡ ತೀವ್ರಗೊಳಿಸಲಾಗಿದೆ. ಆದಿತ್ಯವಾರ ಸೈಂಟ್ ಪೀಟರ್ಸ್‌ಬರ್ಗ್‌ನ ಸ್ಟ್ರೀಟ್ ಫುಡ್ ಬಾರ್ ನಂಬರ್ ೧ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ ರಷ್ಯಾ ಪರ ಬ್ಲಾಗರ್ ಟಾಟರ್ಸ್ಕಿ ಅವರು ಮೃತಪಟ್ಟಿದ್ದರು. ಮಹಿಳೆಯೊಬ್ಬರು ಕಂದು ಬಣ್ಣದ ಕೋಟ್ ಧರಿಸಿ, ಕೆಫೆಯೊಳಗೆ ಬರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಆಕೆ ಉಡುಗೊರೆ ನೀಡಿದ ಮರುಕ್ಷಣವೇ ಸ್ಫೋಟ ಸಂಭವಿಸಿದೆ. ವ್ಲಾಡ್ಲೆನ್ ಟಾಟರ್ಸ್ಕಿ ಅಲಿಯಾಸ್ ನಿಜನಾಮ ಮಾಕ್ಸಿಮ್ ಫೊಮಿನ್ ಅವರು ರಷ್ಯಾದ ಕಟ್ಟಾ ಬೆಂಬಲಿಗನಾಗಿದ್ದು, ಉಕ್ರೇನ್ ವಿರುದ್ಧದ ಯುದ್ದದಲ್ಲಿ ದೇಶದ ಪರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತನ್ನಾಡುತ್ತಿದ್ದರು. ಅಲ್ಲದೆ ಯುದ್ದ ಆರಂಭವಾದ ಬಳಿಕ ಟಾಟರ್ಸ್ಕಿ ಅವರು ನೇರವಾಗಿ ಉಕ್ರೇನ್‌ನಿಂದಲೇ ವರದಿ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರೆ ಯುರೋಪ್‌ನಲ್ಲಿ ಕುಖ್ಯಾತಿಗೆ ಪಾತ್ರವಾಗಿದ್ದರು.