ರಷ್ಯಾ-ಉ.ಕೊರಿಯಾ ಸಹಕಾರಕ್ಕೆ ಆಕ್ರೋಶ

ನ್ಯೂಯಾರ್ಕ್, ಸೆ.೨೩- ಭವಿಷ್ಯದಲ್ಲಿ ಉತ್ತರ ಕೊರಿಯಾ ಹಾಗೂ ರಷ್ಯಾ ನಡುವಿನ ಮಿಲಿಟರಿ ಸಹಕಾರದ ಸಾಧ್ಯತೆ ಬಗ್ಗೆ ಇದೀಗ ಅಮೆರಿಕಾ, ದಕ್ಷಿಣ ಕೊರಿಯಾ ಹಾಗೂ ಜಪಾನ್ ದೇಶಗಳು ಆತಂಕ ವ್ಯಕ್ತಪಡಿಸಿದ್ದು, ಜಂಟಿಯಾಗಿ ವಿರೋಧಿಸಿದೆ.
ಇತ್ತೀಚಿಗಷ್ಟೇ ರಷ್ಯಾಗೆ ಬುಲೆಟ್‌ಪ್ರೂಫ್ ರೈಲಿನ ಮೂಲಕ ತೆರಳಿ, ಅಲ್ಲಿನ ಕ್ಷಿಪಣಿ ತಯಾರಿಕಾ ಘಟಕ, ಯುದ್ದ ವಿಮಾನ ಕೇಂದ್ರಗಳಿಗೆ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜೊಂಗ್ ಉನ್ ಭೇಟಿ ನೀಡಿದ್ದು, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಹಲವು ಹಂತದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಭವಿಷ್ಯದಲ್ಲಿ ಈ ಎರಡೂ ದೇಶಗಳು ಮಿಲಿಟರಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ನಡೆಸಲಿದೆ ಎಂದು ಹೇಳಲಾಗಿದೆ. ಇದರ ಪರಿಣಾಮವೆಂಬಂತೆ ಉತ್ತರ ಕೊರಿಯಾದಿಂದ ರಷ್ಯಾವು ಭಾರೀ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಹೀಗೆ ಪಡೆದುಕೊಂಡ ಕ್ಷಿಪಣಿಗಳನ್ನು ಉಕ್ರೇನ್ ವಿರುದ್ಧ ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಸಹಜವಾಗಿಯೇ ಇದು ಪಾಶ್ಚಿಮಾತ್ಯ ಅದರಲ್ಲೂ ಅಮೆರಿಕಾ-ದಕ್ಷಿಣ ಕೊರಿಯಾ ಹಾಗೂ ಜಪಾನ್‌ಗೆ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರೂ ದೇಶಗಳು ಇದೀಗ ಒಪ್ಪಂದವನ್ನು ಖಂಡಿಸಿದ್ದು, ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ತದ್ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ನಡೆದ ಸಭೆಯಲ್ಲಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಪಾರ್ಕ್ ಜಿನ್ ಹಾಗೂ ಜಪಾನ್‌ನ ವಿದೇಶಾಂಗ ಸಚಿವ ಯೊಕೊ ಕಾಮಿಕಾವಾ ಪಾಲ್ಗೊಂಡಿದ್ದು, ಸಂಭಾವ್ಯ ರಷ್ಯಾ-ಉತ್ತರ ಕೊರಿಯಾ ಮಿಲಿಟರಿ ಸಹಕಾರವನ್ನು ತೀವ್ರ ರೀತಿಯಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.