ರಷ್ಯಾ ಉಕ್ರೇನ್ ಯುದ್ಧ ಅಂತ್ಯಕ್ಕೆ ಭಾರತ ಶ್ರಮಿಸಲಿ

ನ್ಯೂಯಾರ್ಕ್, ಮಾ.೩- ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ದವನ್ನು ನಿಲ್ಲಿಸಲು ಭಾರತ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಅಮೆರಿಕಾ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಹೆಚ್ಚು ಸ್ಪಷ್ಟತೆಯೊಂದಿಗೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ‘ಇದು ಯುದ್ಧದ ಯುಗವಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದನ್ನು ಇಡೀ ಜಗತ್ತೇ ಕೇಳಿದೆ. ಹಾಗಾಗಿ ಭಾರತಕ್ಕೆ ವಿಶಿಷ್ಟವಾದ ಪಾತ್ರವಿದೆ. ಈ ಯುದ್ಧ ಮತ್ತು ರಷ್ಯಾದ ಆಕ್ರಮಣವನ್ನು ಅಂತ್ಯಗೊಳಿಸಲು ಭಾರತದ ಜೊತೆ ನಾವು ನಿಕಟವಾಗಿ ಕೆಲಸ ಮಾಡುವ ಬಗ್ಗೆ ನಾವು ಭಾವಿಸುತ್ತೇವೆ ಎಂದು ಪ್ರೈಸ್ ತಿಳಿಸಿದ್ದಾರೆ. ಜಿ-೨೦ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಅಮೆರಿಕಾದ ಆಂಥನಿ ಬ್ಲಿಂಕೆನ್ ಭಾರತದಲ್ಲಿದ್ದು, ಈ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರೈಸ್ ಪ್ರತಿಕ್ರಿಯೆ ನೀಡಿದರು. ದೆಹಲಿಯಲ್ಲಿ ಗುರುವಾರ ನಡೆದ ಬಹು ನಿರೀಕ್ಷಿತ ಅಂತರ್ ಸರ್ಕಾರಿ ಸಮ್ಮೇಳನದಲ್ಲಿ ಜಿ೨೦ ರಾಷ್ಟ್ರಗಳ ಉನ್ನತ ರಾಜತಾಂತ್ರಿಕರು ಭಾಗವಹಿಸಿದ್ದರು.