
ನ್ಯೂಯಾರ್ಕ್, ಮೇ ೫- ರಷ್ಯಾ ಅಧ್ಯಕ್ಷರ ನಿವಾಸ ಕ್ರೆಮ್ಲಿನ್ ಮೇಲೆ ನಡೆಸಲಾದ ಡ್ರೋನ್ ದಾಳಿಯಲ್ಲಿ ಅಮೆರಿಕಾ ಪ್ರಧಾನ ಪಾತ್ರವನ್ನು ಹೊಂದಿದೆ ಎಂಬ ರಷ್ಯಾ ಆರೋಪವನ್ನು ಅಮೆರಿಕ ಸಾರಾಸಗಟಾಗಿ ತಿರಸ್ಕರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ಇದೊಂದು ಹಾಸ್ಯಾಸ್ಪದ ಆರೋಪವಾಗಿದೆ. ರಷ್ಯಾದ ವಕ್ತಾರ ಡಿಮಿತ್ರಿ ಪೆಷ್ಕೊವ್ ಅವರು ಸುಳ್ಳು ವಾದ ಮಂಡಿಸುತ್ತಿದ್ದಾರೆ. ಡ್ರೋನ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇಲ್ಲಿ ಏನು ನಡೆಯಿತು ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿಲ್ಲ. ಆದರೆ ಅಮೆರಿಕಾ ಇದರಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಗಡಿಯ ಹೊರಭಾಗಕ್ಕೆ ಬಂದು ದಾಳಿ ನಡೆಸಲು ಅಮೆರಿಕಾ ಎಂದಿಗೂ ಪ್ರೋತ್ಸಾಹಿಸಲ್ಲ. ಅಲ್ಲದೆ ವೈಯಕ್ತಿಕ ನಾಯಕರ ಮೇಲೆ ದಾಳಿಯನ್ನು ಕೂಡ ಅನುಮೋದಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಅತ್ತ ರಷ್ಯಾ ಅಧ್ಯಕ್ಷರ ನಿವಾಸ ಕ್ರೆಮ್ಲಿನ್ ಮೇಲೆ ದಾಳಿ ನಡೆದ ಬಳಿಕ ರಷ್ಯಾವು ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ದಕ್ಷಿಣದ ಖೆರ್ಸನ್ ಪ್ರದೇಶದಲ್ಲಿ ನಡೆದ ರಷ್ಯಾ ದಾಳಿಯಲ್ಲಿ ೨೧ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಈಗಾಗಲೇ ಕ್ರೆಮ್ಲಿನ್ ಮೇಲಿನ ದಾಳಿಯನ್ನು ಈಗಾಗಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿರಾಕರಿಸಿದ್ದಾರೆ. ನಾವು ಪುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡುವುದಿಲ್ಲ. ನಾವು ನಮ್ಮ ಭೂಪ್ರದೇಶದಲ್ಲಿ ಹೋರಾಡುತ್ತಿದ್ದು, ನಮ್ಮ ಹಳ್ಳಿಗಳು ಮತ್ತು ನಗರಗಳನ್ನು ರಕ್ಷಿಸುತ್ತಿದ್ದೇವೆ. ಕ್ರೆಮ್ಲಿನ್ ಮೇಲಿನ ದಾಳಿಗೂ ಉಕ್ರೇನ್‌ಗೂ ಯಾವುದೇ ಸಂಬಂಧವಿಲ್ಲ. ಅಧ್ಯಕ್ಷರ ಭವನ ಮೇಲೆ ನಾವು ದಾಳಿ ಮಾಡಿಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಏನಿದ್ದರೂ ನಮ್ಮ ಸಾರ್ವಭೌಮತೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.